ಸರ್ವಪಕ್ಷ ಸಭೆಯಲ್ಲಿ ಕಾವೇರಿ ಪ್ರಸ್ತುತ ಪರಿಸ್ಥಿತಿ ಬಗ್ಗೆ ಡಿಸಿಎಂ ಹೇಳಿದ್ದೇನು?

Dk Shivakumar
Published on

ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರವಾಗಿ ನಡೆದಿರುವ ಸರ್ವಪಕ್ಷ ಸಭೆಯಲ್ಲಿ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ವಸ್ತುಸ್ಥಿತಿ ವಿವರಿಸಿದ್ದಾರೆ.

ಕಾವೇರಿ ನೀರು ನಿರ್ವಹಣೆ ಸಮಿತಿ ಆದೇಶ ಬಂದ ಹಿನ್ನೆಲೆಯಲ್ಲಿ ಈ ತುರ್ತುಸಭೆ ಕರೆಯಲಾಗಿದೆ. ಕಾವೇರಿ ಜಲ ನಿಯಂತ್ರಣಾ ಸಮಿತಿಯ 86ನೇ ಸಭೆಯಲ್ಲಿ ಮುಂದಿನ 15 ದಿನಗಳವರೆಗೆ ಕರ್ನಾಟಕ ರಾಜ್ಯವು ಬಿಳಿಗುಂಡ್ಲುವಿನಲ್ಲಿ ಪ್ರತಿದಿನ 5,000 ಕ್ಯೂಸೆಕ್ಸ್‌ ನೀರಿನ ಪ್ರಮಾಣವನ್ನು ಖಚಿತ ಪಡಿಸುವಂತೆ ನಿರ್ಣಯಿಸಿದೆ ಎಂದರು.

ಈ ವಿಷಯವು ರಾಜ್ಯದ ರೈತರ ಹಿತಾಸಕ್ತಿಯ ದೃಷ್ಟಿಯಿಂದ ಅತೀ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಅತೀ ತುರ್ತಾಗಿ ಈ ದಿನ ತುರ್ತಾಗಿ ಸಭೆ ಕರೆಯಲಾಗಿದೆ ಎಂದು ಹೇಳಿದರು.

ರಾಜ್ಯದ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆಯು ಕಡಿಮೆಯಿದ್ದು, ಮೇ-2024ರವರೆಗೆ ನಮ್ಮ ನೀರಾವರಿ, ಕುಡಿಯುವ ನೀರು ಹಾಗೂ ಇತರೆ ಅಗತ್ಯತೆಗಳಿಗೆ ನೀರನ್ನು ಪೂರೈಸಬೇಕಾಗಿದ್ದು, ಈಗಾಗಲೇ ಮಾಮ್ಸೂನ್ ಮುಗಿಯುವ ಹಂತದಲ್ಲಿದ್ದು, ರಾಜ್ಯದ ಜಲಾಶಯಗಳಿಗೆ ಒಳಹರಿವಿನ ಪ್ರಮಾಣವು ಕ್ಷೀಣಿಸುತ್ತಿದೆ. ಈಗಿನ ಸಂಗ್ರಹಣೆಯನ್ನು ನಮ್ಮ ಅಗತ್ಯತೆಗಳಿಗೆ ಕಾಯ್ದಿರಿಸಬೇಕಾಗಿದೆ ಎಂದು ವಿವರಿಸಿದರು.

ರಾಜ್ಯದ ಕಾವೇರಿ ಕೊಳ್ಳದ ಪರಿಸ್ಥಿತಿ ಅಧ್ಯಯನ ಮಾಡಲು ದಿಲ್ಲಿ ಅಧಿಕಾರಿಗಳನ್ನು ಇಲ್ಲಿಗೆ ಕಳುಹಿಸಿ ಪರಿಶೀಲನೆ ನಡೆಸುವಂತೆ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಮನವಿ ಮಾಡಲಾಗಿದೆ. ನಮ್ಮ ಮುಖ್ಯಮಂತ್ರಿಗಳು ಸಹ ಕೇಂದ್ರ ಸಚಿವರನ್ನು ಭೇಟಿ ಮಾಡಿದಾಗ ರಾಜ್ಯದ ಪರಿಸ್ಥಿತಿ ವಿವರಿಸಿದ್ದಾರೆ ಎಂದರು.

ಸರ್ವಪಕ್ಷ ನಿಯೋಗ ಭೇಟಿಗೆ ಪ್ರಧಾನ ಮಂತ್ರಿಗಳ ಸಮಯ ಕೇಳಲಾಗಿದೆ. ಈ ಮಧ್ಯೆ, ತಮಿಳುನಾಡು ರಾಜ್ಯವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ದಾವೆ ಮತ್ತು ರಾಜ್ಯವು ಸಲ್ಲಿಸಿರುವ ಪ್ರತಿಕ್ರಿಯೆಗಳ ವಿಚಾರಣೆಯು ಸೆ.21ರಂದು ನಿಗದಿಯಾಗಿರುತ್ತದೆ ಎಂದು ಹೇಳಿದರು.

ರಾಜ್ಯದ ಕಾವೇರಿ ಜಲಾನಯನದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಬೆಳೆಗಳಿಗೆ ನೀರಾವರಿಗಾಗಿ 70.20 ಟಿಎಂಸಿ, ಸೆಪ್ಟೆಂಬರ್ 2023 ರಿಂದ ಜುಲೈ 2024 ರವರೆಗೆ ಕುಡಿಯುವ ನೀರಿಗೆ 33 ಟಿಎಂಸಿ ಮತ್ತು ಕೈಗಾರಿಕಾ ಬಳಕೆಗಾಗಿ 3 ಟಿಎಂಸಿ ಹೀಗೆ ಒಟ್ಟು 106.20 ಟಿಎಂಸಿ ನೀರಿನ ಪ್ರಮಾಣದ ಅವಶ್ಯಕವಿರುತ್ತದೆ ಎಂದು ಮಾಹಿತಿ ಹಂಚಿಕೊಂಡರು.

ನಮ್ಮ ಕಾವೇರಿ ಕಣಿವೆಯ 4 ಜಲಾಶಯಗಳಲ್ಲಿನ ಇಂದಿನ ಒಟ್ಟಾರೆ ಲೈವ್ ಸ್ಟೋರೇಜ್ 53.287 ಟಿಎಂಸಿ ಇದ್ದು, ಹಿಂದಿನ ವರ್ಷ ಇದೇ ದಿನದಂದು ಲೈವ್ ಸ್ಟೋರೇಜ್ 103.348 ಟಿಎಂಸಿ ಆಗಿತ್ತು. ಕಳೆದ 30 ವರ್ಷಗಳ ಸರಾಸರಿಗೆ ಹೋಲಿಸಿದಲ್ಲಿ ನೀರಿನ ಒಳಹರಿವಿನಲ್ಲಿ ಒಟ್ಟಾರೆ ಕೊರತೆ ಶೇ.54 ಆಗಿರುತ್ತದೆ.

ಪ್ರಸಕ್ತ ಜಲವರ್ಷದಲ್ಲಿ ತಮಿಳುನಾಡಿಗೆ ಜೂ.1ರಿಂದ ಸೆ. 11ರವರೆಗೆ ಒಟ್ಟು 37.718 ಟಿಎಂಸಿ ನೀರು ಹರಿದಿರುತ್ತದೆ. ಸಾಮಾನ್ಯ ವರ್ಷದಲ್ಲಿ ಆದೇಶದನ್ವಯ ಇದೇ ಅವಧಿಯಲ್ಲಿ 99.860 ಟಿಎಂಸಿ ನೀರನ್ನು ಬಿಡಬೇಕಾಗಿತ್ತು ಎಂದರು.

ಸಾಮಾನ್ಯ ವರ್ಷಗಳಲ್ಲಿ ರಾಜ್ಯದ ಜಲಾಶಯಗಳಿಗೆ ಒಳಹರಿವಿನ ಕೊರತೆಯುಂಟಾಗದೆ ತಮಿಳುನಾಡಿಗೆ ಈ ಹಿಂದೆ ಹಲವಾರು ವರ್ಷಗಳಲ್ಲಿ ನ್ಯಾಯಾಧಿಕರಣದ ಆದೇಶದ ಅನ್ವಯ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣವನ್ನು ಬಿಡಲಾಗಿದೆ. ಕಳೆದ ವರ್ಷ ನಿಗದಿತ 177.75 ಟಿಎಂಸಿ ಪ್ರಮಾಣಕ್ಕೆ ಎದುರಾಗಿ 650 ಟಿಎಂಸಿಗಿಂತ ಅಧಿಕವಾಗಿ ನೀರನ್ನು ಬಿಡಲಾಗಿದೆ ಎಂದು ತಿಳಿಸಿದರು.

ಈ ಸಂಕಷ್ಟದ ಪರಿಸ್ಥಿತಿಯಲ್ಲಿ, ರಾಜ್ಯದ ಕಾವೇರಿ ಕಣಿವೆಯ ರೈತರುಗಳ ಹಿತಾಸಕ್ತಿಯನ್ನು ಕಾಪಾಡುವುದು ಮತ್ತು ಕುಡಿಯುವ ನೀರಿಗಾಗಿ ಅಗತ್ಯವಿರುವ ನೀರಿನ ಪ್ರಮಾಣವನ್ನು ಕಾಯ್ದಿರಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net