

ಬಂಟ್ವಾಳ: ಜಿಲ್ಲೆಯ ಪ್ರಸಿದ್ಧ ದೈವಸ್ಥಾನ ಸಜೀಪಮೂಡ ಗ್ರಾಮದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ವಷರ್ಂಪ್ರತಿಯಂತೆ ಪುದ್ದರ್ದ ಅಗೇಲು ಗುರುವಾರ ನಡೆಯಿತು.
ಪ್ರತಿ ವರ್ಷ ಕಾವೇರಿ ಸಂಕ್ರಮಣದಂದು ತಾಯಿಗೆ ಹೊಸ ಅಕ್ಕಿಯ ಅನ್ನ ಹಾಗೂ ಹಲವಾರು ಬಗೆಯ ತರಕಾರಿಯಿಂದ ತಯಾರಿಸಿದ ಪದಾರ್ಥದ ನೈವೇದ್ಯದೊಂದಿಗೆ ಅಗೇಲು ಸಮರ್ಪಿಸುವ ಪರಂಪರೆ ನಡೆದುಕೊಂಡು ಬರುತ್ತಿದ್ದು, ಗುರುವಾರ 1242 ಅಗೇಲು ಸೇವೆ ಸಲ್ಲಿಕೆಯಾಗಿದೆ.
ಪಣೋಲಿಬೈಲು ದೈವಸ್ಥಾನದ ಒಂದನೇ ಅರ್ಚಕ ವಾಸು ಮೂಲ್ಯ, ಎರಡನೇ ಅರ್ಚಕ ನಾರಾಯಣ ಮೂಲ್ಯ, ಮೂರನೇ ಅರ್ಚಕ ಮೋನಪ್ಪ ಮೂಲ್ಯ, ಕಾರ್ಯನಿರ್ವಾಹಣಾಧಿಕಾರಿ ದಿವಾಕರ ಮುಗುಳಿ, ದೈವದ ಚಾಕರಿಯವರಾದ ರಮೇಶ್ ಕುಲಾಲ್ ಪಣೋಲಿಬೈಲು, ಭಂಡಾರದ ಮನೆಯ ನವೀನ್ ಕುಲಾಲ್ ಮತ್ತು ಜಯರಾಮ್ ಶೆಟ್ಟಿ ನಗ್ರಿಗುತ್ತು ಹಾಗೂ ದೈವದ ಚಾಕರಿಯವರು, ಸಿಬ್ಬಂದಿ ಹಾಗೂ ಊರ-ಪರಊರಭಕ್ತರು ಪುದ್ದಾರ್ದ ಅಗೇಲು ಸೇವೆಯಲ್ಲಿ ಹಾಜರಿದ್ದರು.
ಪಣೋಲಿಬೈಲು ಕ್ಷೇತ್ರದಲ್ಲಿ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ಮಾತ್ರ ಅಗೇಲು ಸೇವೆ ನಡೆಯುತ್ತದೆ.ಆದರೆ ಕಾವೇರಿ ಸಂಕ್ರಮಣ ಬರುವ ದಿನ ಇಲ್ಲಿ ಪುದ್ದರ್ದ ಅಗೇಲು ನಡೆಯುತ್ತದೆ. ಭಕ್ತರು ಪುದ್ದಾರ್ ಅಗೆಲು ಸೇವೆಗೆ ವಿವಿಧ ಬಗೆಯ ತರಕಾರಿಗಳನ್ನು ನೀಡುತ್ತಾರೆ. ಈ ದಿನ ಅಗೇಲು ಸೇವೆಯಲ್ಲಿ ತರಕಾರಿಗಳನ್ನು ಬಡಿಸುವುದು ವಿಶೇಷವಾಗಿದೆ. ಕಾವೇರಿ ಸಂಕ್ರಮಣ ಸೋಮವಾರ ಅಥವಾ ಶನಿವಾರ ಬಂದಲ್ಲಿ ದೈವಕ್ಕೆ ಅಗೆಲು ಸೇವೆ ಮಾಡುವುದಿಲ್ಲ, ಇದರ ಬದಲಾಗಿ ಮುಂದಿನ ದಿನ ಅಥವಾ ಮರುದಿನ ಹೊಸ ಅಕ್ಕಿ ಅಗೆಲು ಬಡಿಸಲಾಗುತ್ತದೆ.