

ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ '45' ಚಿತ್ರಕ್ಕೆ ನಾಯಕಿ ಬೇಕಾಗಿದ್ದಾಳೆ ಎಂದು ನಿರ್ದೇಶಕ ಅರ್ಜುನ್ ಜನ್ಯ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ದರು. ಹಾಗೆ ಹಾಕಿದ್ದೇ ಹಾಕಿದ್ದು, ಈಗ ಚಿತ್ರತಂಡದವರಿಗೆ ಕೊನೆಗೂ ನಾಯಕಿ ಸಿಕ್ಕಾಗಿದೆ.
'45' ಚಿತ್ರಕ್ಕೆ 'ನನ್ನರಸಿ ರಾಧೆ' ಖ್ಯಾತಿಯ ಕೌಸ್ತುಭ ಮಣಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದು ಅವರ ಎರಡನೆಯ ಚಿತ್ರವಾಗಿದ್ದು, ಇದಕ್ಕೂ ಮುನ್ನ ತೇಜ್ ಅಭಿನಯದ ಮತ್ತು ನಿರ್ದೇಶನದ 'ರಾಮಾಚಾರಿ 2.0' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. '45', ಕೌಸ್ತುಭ ಅಭಿನಯದ ಎರಡನೆಯ ಚಿತ್ರವಾಗಿದೆ.
ಚಿತ್ರಕ್ಕೆ ನಾಯಕಿಯೇನೋ ಸಿಕ್ಕಾಗಿದೆ. ಆದರೆ, ಯಾರಿಗೆ ನಾಯಕಿ ಎಂಬ ಕುತೂಹಲ ಮಾತ್ರ ಹೆಚ್ಚಾಗಿದೆ. ಚಿತ್ರದಲ್ಲಿ ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅಭಿನಯಿಸುತ್ತಿದ್ದು, ಈ ಮೂವರಲ್ಲಿ ಕೌಸ್ತುಭ ಯಾರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಮಾತ್ರ ಚಿತ್ರತಂಡ ಉತ್ತರಿಸಿಲ್ಲ.
'45' ಚಿತ್ರದ ಮೂಲಕ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಈ ಚಿತ್ರವನ್ನು 'ನಾತಿಚರಾಮಿ', 'ಗಾಳಿಪಟ 2' ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.