ಕೌನ್ ಬನೇಗಾ ಕರೋಡ್ ಪತಿ ಸೀಸನ್ 17 ಆರಂಭ; ಕರ್ನಲ್ ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗ್ ಭಾಗಿ| KBC

Sophia Qureshi
Published on

KBC: ಬಾಲಿವುಡ್ ಬಿಗ್​ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ‘ಕೌನ್​ ಬನೇಗಾ ಕರೋಡ್ ಪತಿ’ ಸೀಸನ್ 17 ಸೋಮವಾರ ಪ್ರಾರಂಭವಾಗಿದ್ದು, ಕಾರ್ಯಕ್ರಮದ ಮೊದಲ ಎಪಿಸೋಡ್ ಅತಿಥಿಗಳಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ಭಾರತೀಯ ಸಶಸ್ತ್ರ ಪಡೆಯ ಅಧಿಕಾರಿಗಳು ಭಾಗವಹಿಸಿದ್ದಾರೆ.

ಸೋನಿ ಟಿವಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಕಾರ್ಯಕ್ರಮದ ನಿರೂಪಕ ಅಮಿತಾಬ್ ಬಚ್ಚನ್, ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ, ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹಾಗೂ ನೌಕಾಪಡೆಯ ಕಮಾಂಡರ್ ಪ್ರೇರಣಾ ದಿಯೋಸ್ಥಲಿ ಅವರನ್ನು ಸ್ವಾಗತಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಭಾರತಕ್ಕೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಾಕೆ ಬೇಕಿತ್ತು ಅನ್ನೋದನ್ನು ಕರ್ನಲ್ ಸೋಫಿಯಾ ಖುರೇಷಿ ಅಮಿತಾಬ್ ಬಚ್ಚನ್​ಗೆ ವಿವರಿಸಿದ್ದಾರೆ. ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ರಾತ್ರಿ 9 ಗಂಟೆಗೆ ಎಪಿಸೋಡು ಪ್ರಸಾರವಾಗಲಿದೆ.

ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ಮೇ 7 ರ ಬೆಳಿಗ್ಗೆ ನಡೆಸಿದ ಒಂಬತ್ತು ಪಾಕಿಸ್ತಾನಿ ಭಯೋತ್ಪಾದಕ ಶಿಬಿರಗಳ ಮೇಲೆ ಗುರಿಯಿಟ್ಟು ನಡೆಸಿದ ದಾಳಿಗಳ ಸರಣಿ ಆಪರೇಷನ್ ಸಿಂಧೂರ್ ಬಗ್ಗೆ ಅಧಿಕಾರಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡಿರುವುದು ಕಾಣಿಸುತ್ತದೆ.

ಪಾಕಿಸ್ತಾನ ಉಗ್ರಕೃತ್ಯಗಳನ್ನು ಬಹಳ ವರ್ಷಗಳಿಂದ ಮಾಡುತ್ತಾ ಬರುತ್ತಿದೆ. ಅದಕ್ಕೆ ಉತ್ತರ ನೀಡುವುದು ಮುಖ್ಯ, ಅದಕ್ಕಾಗಿ ಆಪರೇಷನ್ ಸಿಂಧೂರ ನಡೆಸುವುದು ಮುಖ್ಯ ಎಂದು ಸೋಫಿಯಾ ಖುರೇಷಿ ಹೇಳಿದರೆ,, ಇದಕ್ಕೆ ವ್ಯೋಮಿಕಾ ಸಿಂಗ್, ರಾತ್ರಿ 1.05ರಿಂದ 1.30ರ ನಡುವೆ ಅವರ ಆಟವನ್ನು ನಾವು ಕೇವಲ 25 ನಿಮಿಷಗಳಲ್ಲಿ ಕೊನೆಗೊಳಿಸಿದ್ದೇವೆ ಎಂದಿದ್ದಾರೆ. ನಾವು ಕೇವಲ ಉಗ್ರರ ತಾಣಗಳನ್ನು ನಾಶ ಮಾಡಿದ್ದೇವೆ, ಯಾವುದೇ ನಾಗರಿಕರಿಗೆ ಹಾನಿಯಾಗಿಲ್ಲ ಎಂದು ಪ್ರೇರಣ ಹೇಳಿದ್ದಾರೆ. ಕೊನೆಗೆ ಇದು ಹೊಸ ಭಾರತ ಎಂದು ಕರ್ನಲ್ ಸೋಫಿಯಾ ಹೇಳಿದ್ದು, ಬಚ್ಚನ್ ಮತ್ತು ಪ್ರೇಕ್ಷಕರು ಭಾರತ್ ಮಾತಾ ಕೀ ಜೈ ಎನ್ನುವ ಘೋಷಣೆಯೊಂದಿಗೆ ವಿಡಿಯೋ ಕೊನೆಗೊಂಡಿದೆ ಪ್ರೋಮೋದಲ್ಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net