

ಸಂದೀಪ್ ಸಾಲ್ಯಾನ್ ಬಂಟ್ವಾಳ
ವಯಸ್ಸು ಕೇವಲ ನಾಲ್ಕೂವರೆ ವರ್ಷ. ಆದರೆ ಈಕೆ ರಂಗಸ್ಥಳದಲ್ಲಿ ಹೆಜ್ಜೆ ಹಾಕಿದರೆ ಪ್ರೇಕ್ಷಕರು ವಿಸ್ಮಿತರಾಗುತ್ತಾರೆ. ಚೆಂಡೆ, ಮದ್ದಳೆಯ ನಿನಾದಕ್ಕೆ ಹೆಜ್ಜೆ ಹಾಕುವ ಬಂಟ್ವಾಳ ತಾಲೂಕಿನ ಬೋಳಂತೂರಿನ ನಾಲ್ಕೂವರೆ ವರ್ಷದ ಪೋರಿ ಕಶ್ವಿ ರೈ ಪ್ರೇಕ್ಷಕರ ಗಮನಸೆಳೆದಿದ್ದಾಳೆ.
ಅಕ್ಕನೊಂದಿಗೆ ಬಂದವಳು ಹೆಜ್ಜೆ ಕಲಿತಳು: ತಂದೆ, ತಾಯಿ ಯಕ್ಷಗಾನ ಕಲಾವಿದರಲ್ಲ. ಆದರೆ ಅವರ ಪುಟ್ಟ ಮಗು ಯಕ್ಷಗಾನದ ಆಕರ್ಷಣೆಗೆ ಒಳಗಾಗಿದ್ದು ವಿಶೇಷ. ಕಟೀಲು ಮೇಳದ ಪ್ರಸಿದ್ಧ ಕಲಾವಿದ ಗಣೇಶ್ ಪಾಲೆಚ್ಚಾರ್ ಹಲವೆಡೆ ಯಕ್ಷಗಾನ ತರಬೇತಿ ನಡೆಸಿಕೊಡುತ್ತಾರೆ. ಅವುಗಳಲ್ಲಿ ಬೋಳಂತೂರಿನಲ್ಲಿ ಶ್ರೀ ಇರಾ ಸೋಮನಾಥೇಶ್ವರ ಯಕ್ಷಗಾನ ಕಲಾ ಸಂಘವೂ ಒಂದು. ಇಲ್ಲಿ ಅಕ್ಕ ಹರ್ಷಿತಾ ಬಂದಾಗ ಜತೆಗೆ ಮೂರೂವರೆ ವರ್ಷದ ತಂಗಿಯೂ ಬರುತ್ತಿದ್ದಳು. ಉಳಿದವರಿಗೆ ಕಲಿಸುವುದನ್ನೇ ನೋಡಿ ಕಲಿತವಳ ಹೆಜ್ಜೆ ಪರ್ಫೆಕ್ಟ್ ಇತ್ತು ಎನ್ನುತ್ತಾರೆ ಗುರು ಗಣೇಶ್ ಪಾಲೆಚ್ಚಾರ್.
ಕಶ್ವಿಯ ಕಲಿಯುವ ತುಡಿತ ಗಮನಿಸಿದ ಗಣೇಶ್ ಪಾಲೆಚ್ಚಾರ್, ಹೆಜ್ಜೆಗಳನ್ನು ಶಾಸ್ತ್ರೀಯವಾಗಿ ಹೇಗೆ ಹಾಕುವುದು ಎಂಬ ಕುರಿತು ತಿದ್ದಿ ಹೇಳಿಕೊಟ್ಟರು. ಇನ್ನೂ ಅಕ್ಷರಾಭ್ಯಾಸವನ್ನೇ ಸರಿಯಾಗಿ ಕಲಿಯಲು ಆರಂಭಿಸಬೇಕಾಗಿದ್ದ ಮಗು ಯಕ್ಷಗಾನದ ನಾಟ್ಯ ಕರಗತ ಮಾಡಿಕೊಂಡಳು. ರಂಗದ ಮೇಲಿನ ಆಸಕ್ತಿಯನ್ನು ಗಮನಿಸಿದ ಗಣೇಶ್, ಉಳಿದ ಮಕ್ಕಳೊಂದಿಗೆ ಕಶ್ವಿಗೂ ಪುಟ್ಟ ಪಾತ್ರ ನೀಡಿ, ತರಬೇತುಗೊಳಿಸಿದರು. ಅಲ್ಲಿಂದ ಹಲವು ವೇಷ ಹಾಕಿ ಈ ಪೋರಿ ನೋಡುಗರ ಮನ ಗೆದ್ದಿದ್ದಾಳೆ. ಕಲ್ಲಡ್ಕದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಯು.ಕೆ.ಜಿ ಕಲಿಯುತ್ತಿರುವ ಈಕೆ ನೃತ್ಯವಿದುಷಿ ವಸುಧಾ ಜಿ.ಎನ್. ಅವರ ಬಳಿ ಭರತನಾಟ್ಯವನ್ನೂ ಕಲಿಯುತ್ತಿದ್ದಾಳೆ.
ಕಾಸರಗೋಡು ಜಿಲ್ಲೆಯ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯಕ್ಷಗುರು, ಹಿಮ್ಮೇಳ ಕಲಾವಿದ ಗಣೇಶ್ ಪಾಲೆಚ್ಚಾರ್ ಅವರ ಬೋಳಂತೂರು ಇರಾ ಸೋಮನಾಥೇಶ್ವರ ಯಕ್ಷಗಾನ ತಂಡದಲ್ಲಿದ್ದ ಕಶ್ವಿ ರೈಯ ವಿಡಿಯೋವೊಂದನ್ನು ಪ್ರೇಕ್ಷಕರೊಬ್ಬರು ಟ್ವಿಟ್ಟರ್ನಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪಸರಿಸಿ ವೈರಲ್ ಆಗಿತ್ತು.