

ಬೆಂಗಳೂರು: ಶ್ರೀ ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ ವತಿಯಿಂದ ಜ.3ರಿಂದ ಜ.9ರವರೆಗೆ ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರಿಂದ ‘ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಹಾಗೂಈ ಧನುರ್ಮಾಸದ ಇಷ್ಟಲಿಂಗ ಮಹಾ ಶಿವಪೂಜೆ’ ಆಯೋಜಿಸಲಾಗಿದೆ. ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಪ್ರತಿನಿತ್ಯ ಸಂಜೆ 6ಕ್ಕೆ ಕಾರ್ಯಕ್ರಮ ನಡೆಯಲಿದೆ.
ಜ.3ರಂದು ಸಚಿವ ಶಿವರಾಜ್ ತಂಗಡಗಿ ಪ್ರವಚನ ಸಪ್ತಾಹಕ್ಕೆ ಚಾಲನೆ ನೀಡಲಿದ್ದು, ಶಿವಗಂಗೆಯ ಡಾ.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ವಿಭೂತಿಪುರದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಶಾಸಕ ಎಂ. ಕೃಷ್ಣಪ್ಪ, ಮಕ್ಕಳ ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜ.4ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪಾಲ್ಗೊಳ್ಳಲಿದ್ದಾರೆ. ಕಾಶೀ ಜಗದ್ಗುರು ವಿರಚಿತ ಇಷ್ಟಲಿಂಗಾಷ್ಠಕಕ್ಕೆ ಸಂಗೀತ ಸಂಯೋಜನೆ ಮಾಡಲಾಗಿದ್ದು, ಅದರ ಲೋಕಾರ್ಪಣೆ ಮಾಡಲಿದ್ದಾರೆ.
ಜ.5ರಂದು ಕಾಶೀ ಜಗದ್ಗುರು ವಿರಚಿತ ‘ವೀರಶೈವ ಅಷ್ಟಾವರಣ ವಿಜ್ಞಾನ’ ಹಿಂದಿ ಕೃತಿಯ ಕನ್ನಡಾನುವಾದ ಗ್ರಂಥ ಲೋಕಾರ್ಪಣೆಗೊಳ್ಳಲಿದೆ. ಜ.6ರಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ‘ಪಂಚಾಚಾರ್ಯಶ್ರೀ’ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಜ.4ರಿಂದ 9ರವರೆಗೆ ಧನುರ್ಮಾಸದ ಅಂಗವಾಗಿ ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಕಾಶೀ ಜಗದ್ಗುರುಗಳ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಏರ್ಪಡಿಸಲಾಗಿದ್ದು, ಸಮಾಜ ಬಾಂಧವರು ಸಮಯಕ್ಕೆ ಸರಿಯಾಗಿ ಆಗಮಿಸಿ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಸಿ.ಯು. ಉಮಾದೇವಿ ಮನವಿ ಮಾಡಿದ್ದಾರೆ.