More

    ರಾಮಲಲ್ಲಾ ಪ್ರತಿಷ್ಠಾಪನೆ ಅಭಿಯಾನ, ಪ್ರತಿ ಮನೆಗೆ ಮಂತ್ರಾಕ್ಷತೆ

    ಬೆಂಗಳೂರು : ಕೋಟ್ಯಾಂತರ ಶ್ರೀರಾಮ ಭಕ್ತರ ಶತಮಾನಗಳ ಕನಸು ಸಾಕಾರಗೊಳ್ಳುವ ಅಮೃತಕ್ಷಣಕ್ಕೆ ದಿನಗಣನೆ ಆರಂಭವಾಗಿದ್ದು, ಅಯೋಧ್ಯೆಯಲ್ಲಿ ನಡೆಯುವ ರಾಮಲಲ್ಲಾ ಪ್ರತಿಷ್ಠಾಪನೆಯ ಕುರಿತು ಜನರಿಗೆ ಜಾಗೃತಿ ಮೂಡಿಸಲು ಪ್ರತಿ ಮನೆಗೆ ಶ್ರೀರಾಮ ಮಂತ್ರಾಕ್ಷತೆಯನ್ನು ತಲುಪಿಸುವ ಬೃಹತ್ ಸಂಪರ್ಕ ಅಭಿಯಾನವನ್ನು ಹಮ್ಮಿಕೊಂಡಿರುವುದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹರಾದ ನಾ. ತಿಪ್ಪೇಸ್ವಾಮಿ ಅವರು ಹೇಳಿದ್ದಾರೆ.

    ಚಾಮರಾಜಪೇಟೆಯಲ್ಲಿರುವ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಾಗೂ ವಿಶ್ವ ಹಿಂದೂ ಪರಿಷತ್ ಸಹಯೋಗದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದ ಕೊನೆಯ ಹಂತದ ಸಿದ್ಧತೆಗಳು ಪೂರ್ಣಗೊಂಡಿದ್ದು, ದೇಶದ ಕೋಟ್ಯಾಂತರ ಜನರನ್ನು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ದೇಶದ ಎಲ್ಲ ಹಿಂದುಗಳ ಮನೆಗೆ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ಮತ್ತು ಕ್ಷೇತ್ರದ ಮಾಹಿತಿಯುಳ್ಳ ಕರಪತ್ರ ಹಾಗೂ ನೂತನ ರಾಮಮಂದಿರದ ಭಾವಚಿತ್ರವನ್ನು ತಲುಪಿಸುವುದಕ್ಕೆ ಈ ಅಭಿಯಾನ ಹಮ್ಮಿಕೊಂಡಿರುವುದಾಗಿ ಅವರು ವಿವರಿಸಿದರು.

    ಅಯೋಧ್ಯೆಗೆ ದೇಶದ ಎಲ್ಲ ಭಾಗಗಳಿಂದ ಬರುವ ಭಕ್ತರಿಗೆ ಕೇಂದ್ರ ಸರ್ಕಾರ ವಿಶೇಷ ರೈಲಿನ ವ್ಯವಸ್ಥೆ ಮಾಡಿದ್ದು, ಕರ್ನಾಟಕ ರಾಜ್ಯದಿಂದ ಬರುವ ರೈಲಿಗೆ ಜ.೧೯ಕ್ಕೆ ದಿನಾಂಕ ನಿಗದಿಯಾಗಿದೆ. ಜ.೧೭ರಂದು ಹೊರಡುವ ವಿಶೇಷ ರೈಲಿನಲ್ಲಿ ಪ್ರತಿ ಜಿಲ್ಲೆಯಿಂದ ೫೦ ಜನರಿಗೆ ಅವಕಾಶ ದೊರೆಯಲಿದೆ. ರೈಲು ಟಿಕೆಟ್ ದರವನ್ನು ಪಾವತಿಸಬೇಕಾಗಿದ್ದು, ಊಟ, ವಸತಿ ಇನ್ನಿತರೆ ಎಲ್ಲ ವ್ಯವಸ್ಥೆಯನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನೀಡಲಿದೆ.

    ಜ.೧ರಿಂದ ೧೫ರವರೆಗೆ ಅಭಿಯಾನ : ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಜ.೨೨ ರಂದು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಜ.೧ ರಿಂದಲೇ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ದೇಶಾದ್ಯಂತ ಜ.೧ ರಿಂದ ೧೫ ರವರೆಗೆ ಪ್ರತಿ ಮನೆಗೂ ಮಂತ್ರಾಕ್ಷತೆ, ಕರಪತ್ರ, ರಾಮಮಂದಿರದ ಭಾವಚಿತ್ರ ವಿತರಿಸುವ ಅಭಿಯಾನ ನಡೆಯಲಿದೆ. ಕರ್ನಾಟಕದ ಸುಮಾರು ೨೯ ಸಾವಿರ ಗ್ರಾಮದ ಪ್ರತಿ ಮನೆಗೂ ಭೇಟಿ ನೀಡಲು ಸಂಘದ ಕಾರ್ಯಕರ್ತರ ತಂಡ ಸಿದ್ಧವಾಗಿದೆ ಎಂದು ನಾ. ತಿಪ್ಪೇಸ್ವಾಮಿ ತಿಳಿಸಿದ್ದಾರೆ.

    ಈಗಾಗಲೇ ಅಯೋಧ್ಯೆಯಿಂದ ಮಂತ್ರಾಕ್ಷತೆ ಕರ್ನಾಟಕಕ್ಕೆ ಬಂದಿದ್ದು, ಅದನ್ನು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ತಲುಪಿಸಲಾಗಿದೆ. ಸುಮಾರು ೧ ಲಕ್ಷಕ್ಕಿಂತ ಹೆಚ್ಚಿನ ಕಾರ್ಯಕರ್ತರು ಈ ಅಭಿಯಾನವನ್ನು ಯಶಸ್ವಿಗೊಳಿಸುವ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಈ ಹಿಂದೆ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣೆ ಅಭಿಯಾನಕ್ಕೆ ರಾಜ್ಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಾಜ್ಯದಿಂದ ನೂರಾರು ಕೋಟಿ ಹಣ ಸಂಗ್ರಹವಾಗಿತ್ತು. ಈಗ ನಡೆಯುತ್ತಿರುವ ಅಭಿಯಾನದಲ್ಲಿ ಯಾವುದೇ ಹಣ ಸಂಗ್ರಹ, ಕಾಣಿಕೆ ಸಮರ್ಪಣೆ ಇರುವುದಿಲ್ಲ. ಅಭಿಯಾನದ ವೇಳೆ ಯಾರೂ ಹಣ ನೀಡಬಾರದು ಎಂದು ಟ್ರಸ್ಟ್ ಮನವಿ ಮಾಡಿದೆ.

    ಜ.೨೨ರಂದು ಸತ್ಸಂಗ, ಭಜನೆ, ದೀಪಾರಾಧನೆ : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಮತ್ತು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗುವ ಜ.೨೨ರಂದು ದೇಶದ ಎಲ್ಲ ಗ್ರಾಮಗಳಲ್ಲಿರುವ ಯಾವುದೇ ದೇವಾಲಯವಿದ್ದರೂ ಅಲ್ಲಿ ಸತ್ಸಂಗ, ಭಜನೆ ನಡೆಸಲು ಆರ್‌ಎಸ್‌ಎಸ್ ಕಾರ್ಯಕ್ರಮ ರೂಪಿಸಿದೆ.

    ಕೋಟ್ಯಾಂತರ ಸಂಖ್ಯೆಯ ಶ್ರೀರಾಮಭಕ್ತರು ಅಯೋಧ್ಯೆಗೆ ಹೋಗಬೇಕೆಂಬ ಇಚ್ಛೆಯನ್ನು ಹೊಂದಿದ್ದರೂ ಎಲ್ಲರೂ ಹೋಗುವುದು ಅಸಾಧ್ಯವಾಗಿದ್ದು, ಪ್ರತಿ ಗ್ರಾಮದ ಒಂದು ದೇವಾಲಯದಲ್ಲಿ ಎಲ್‌ಇಡಿ ಪರದೆ ಅಳವಡಿಸಿ ರಾಮಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗುವುದು. ಗ್ರಾಮದ ಜನರು ಅಂದಿನ ಸತ್ಸಂಗದಲ್ಲಿ ಪಾಲ್ಗೊಂಡು ಭಜನೆ, ಕೀರ್ತನೆಗಳನ್ನು ಮಾಡುತ್ತಾ ನೇರಪ್ರಸಾರ ವೀಕ್ಷಿಸಬಹುದು.

    ಅಂದು ಸಂಜೆ ಸೂರ್ಯಾಸ್ತವಾದ ನಂತರ ಪ್ರತಿ ಮನೆಯ ಮುಂದೆ ೫ ದೀಪಗಳನ್ನು ಉತ್ತರ ದಿಕ್ಕಿಗೆ ಹಚ್ಚಿಡುವ ಮೂಲಕ ಬೃಹತ್ ದೀಪಾರಾಧನೆಯಲ್ಲಿ ಪಾಲ್ಗೊಳ್ಳಬೇಕೆಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಿಂದು ಸಮಾಜಕ್ಕೆ ಕರೆ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts