More

    ಅಯೋಧ್ಯೆಗೆ ಭಕ್ತಸಾಗರ: ಮುಂಜಾನೆ 3.30ರಿಂದ ದರ್ಶನ ಭಾಗ್ಯ

    ಅಯೋಧ್ಯೆ: ವಿಶ್ವದಾದ್ಯಂತ ರಾಮನವಮಿಯನ್ನು ಬುಧವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದ್ದು, ಅಯೋಧ್ಯೆಯಲ್ಲಿ ಬಾಲರಾಮ ದೇವರ ಪ್ರಾಣಪ್ರತಿಷ್ಠೆಯಾದ ಬಳಿಕ ಬಂದಿರುವ ಮೊದಲ ರಾಮನವಮಿ ಇದಾಗಿರುವುದರಿಂದ ಅಪಾರ ಭಕ್ತಾದಿಗಳ ನೂಕುನುಗ್ಗಲು ಕಂಡು ಬರುತ್ತಿದೆ. ಬುಧವಾರ ಮುಂಜಾನೆ 3.30ಕ್ಕೆ ಯಾತ್ರಾರ್ಥಿಗಳಿಗೆ ರಾಮಮಂದಿರದ ಬಾಗಿಲು ತೆರೆಯಲಾಗಿದ್ದು, ಗರ್ಭಗುಡಿಯಲ್ಲಿ ನಡೆಯುವ ಆಚರಣೆಯನ್ನು ಅಯೋಧ್ಯೆಯಾದ್ಯಂತ ಸುಮಾರು ನೂರು ದೊಡ್ಡ ಎಲ್ಇಡಿ ಪರದೆಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ.

    ಇದನ್ನೂ ಓದಿ: ಮಾನ್ಸೂನ್​ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ:ಹವಾಮಾನ ಇಲಾಖೆ ಮಾಹಿತಿ

    ದೇವಾಲಯಕ್ಕೆ ಭೇಟಿ ನೀಡುವ ಮೊದಲು, ಭಕ್ತರು ಅಯೋಧ್ಯೆಯ ಪವಿತ್ರ ಸರಯು ನದಿಯಲ್ಲಿ ಸ್ನಾನ ಮಾಡಿದರು. ರಾತ್ರಿಯಿಂದಲೇ ಭಕ್ತರ ದಂಡು ಸ್ನಾನದ ಘಾಟಿಗೆ ಬರಲಾರಂಭಿಸಿತ್ತು. ರಾಮಮಂದಿರದಲ್ಲಿ ಬೆಳಗಿನ ಜಾವ 3.30ಕ್ಕೆ ‘ದರ್ಶನ’ ಆರಂಭವಾಗಿದ್ದು, ನಸುಕತ್ತಲಲ್ಲೇ ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದರು.

    ರಾಮಮಂದಿರದಲ್ಲಿ ಬೆಳಗ್ಗೆ ಆರತಿ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ರಾಮ ಮಂದಿರದ ನಿರ್ವಹಣೆ ಸಂಸ್ಥೆ ಮಂದಿರದಲ್ಲಿ ರಾಮ ಲಲ್ಲಾ ದೇವರಿಗೆ “ದಿವ್ಯ ಅಭಿಷೇಕ” ವನ್ನು ಬೆಳಗ್ಗೆ ಶ್ರದ್ಧಾ ಭಕ್ತಿಯಿಂದ ಆಚರಿಸಿತು.

    ಇನ್ನು ರಾಮ್ ಲಲ್ಲಾ ದೇವರ ಹಣೆಯ ಮೇಲೆ ಸೂರ್ಯ ತಿಲಕ ಮೂಡುವುದು ಶ್ರೀರಾಮನವಮಿಯ ವಿಶೇಷವಾಗಿದ್ದು, ಇದನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತುರದಿಂದ ಕಾಯುತ್ತಿರುವುದು ಕಂಡುಬಂದಿತು.

    ವಿಐಪಿ ಟಿಕೆಟ್​ ರದ್ದು: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಾಮನವಮಿ ಪ್ರಯುಕ್ತ ದರ್ಶನದ ಅವಧಿ ವಿಸ್ತರಿಸಿದ್ದು, ವಿಐಪಿ ಪಾಸ್‌ಗಳನ್ನು ಸಹ ರದ್ದುಗೊಳಿಸಲಾಗಿದೆ. ಎಲ್ಲರೂ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯಬೇಕಿದೆ.

    ಪ್ರಧಾನಿ ಮೋದಿ ಶುಭಾಷಯ: ಪ್ರಧಾನಿ ನರೇಂದ್ರ ಮೋದಿ ಅವರು ರಾಮ ನವಮಿಯ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರಿದರು. ರಾಮ ಮಂದಿರ ನಿರ್ಮಾಣ ನಂತರ ಅಯೋಧ್ಯೆಯಲ್ಲಿ ಇದೇ ಮೊದಲ ಬಾರಿಗೆ ರಾಮನವಮಿ ಆಚರಿಸುತ್ತಿರುವುದರಿಂದ ಅಯೋಧ್ಯೆಯು ಹೋಲಿಸಲಾಗದ ಆನಂದದಲ್ಲಿದೆ ಎಂದು ಪ್ರತಿಪಾದಿಸಿದ್ದಾರೆ.

    ಪ್ರಭು ಶ್ರೀರಾಮನ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಮತ್ತು ಸದಾಚಾರ ಮತ್ತು ಶಾಂತಿಯ ಕಡೆಗೆ ನಮ್ಮನ್ನು ದೇವರು ಮಾರ್ಗದರ್ಶಿಸಲಿ. ನಮ್ಮ ಜೀವನವನ್ನು ಬುದ್ಧಿವಂತಿಕೆ ಮತ್ತು ಧೈರ್ಯದಿಂದ ಬೆಳಗಿಸಲಿ. ಇದು ಕೋಟಿಗಟ್ಟಲೆ ಭಾರತೀಯರು ಕಾಯುತ್ತಿರುವ ದಿನ ಎಂದು X ನಲ್ಲಿ ಪ್ರಧಾನಿ ಮೋದಿ ಪೋಸ್ಟ್‌ನಲ್ಲಿ ಹೇಳಿದ್ದಾರೆ.

    500 ವರ್ಷದ ನಂತರ ಸಡಗರ: ಅಯೋಧ್ಯೆಯಲ್ಲಿ ರಾಮನವಮಿ ಸಡಗರ 500ದ ವರ್ಷದ ನಂತರ ಮೇಳೈಸಿದೆ. ಇಡೀ ದೇಶವು ಸಂಭ್ರಮದಲ್ಲಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ವಕ್ತಾರ ಶರದ್ ಶರ್ಮಾ ಹೇಳಿದ್ದಾರೆ.

    ಬಿಗಿ ಭದ್ರತಾ ವ್ಯವಸ್ಥೆ: ಭದ್ರತಾ ವ್ಯವಸ್ಥೆಗಳನ್ನು ಅಯೋಧ್ಯೆ ರೇಂಜ್ ಐಜಿ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ನೋಡಿಕೊಳ್ಳಲಾಗುತ್ತಿದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ವಿಶೇಷ ಗಮನಹರಿಸಲಾಗಿದ್ದು, ಕುಡಿಯುವ ನೀರಿನ ವ್ಯವಸ್ಥೆ, ಬಿಸಿಲಿನಿಂದ ರಕ್ಷಿಸಲು ಬಣ್ಣಬಣ್ಣದ ಟಾರ್ಪಲ್, ಭಕ್ತರಿಗೆ ತಂಗಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

    ಆಚರಣೆಗಳು ಏನೇನಿದೆ?: ರಾಮಮಂದಿರದಲ್ಲಿ ಬ್ರಹ್ಮ ಮುಹೂರ್ತದಲ್ಲಿ ಭಕ್ತರಿಗೆ ಬೆಳಗಿನ ಜಾವ 3.30ರಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 5 ಗಂಟೆಗೆ ರಾಮ್ ಲಲ್ಲಾ ದೇವರ ಶೃಂಗಾರ ಆರತಿ ನಡೆಯಿತು. ದೇವರಿಗೆ ಅನ್ನಸಂತರ್ಪಣೆ ವೇಳೆ ಅಲ್ಪಾವಧಿಗೆ ತೆರೆ ಎಳೆಯಲಾಯಿತು. ರಾತ್ರಿ 11 ಗಂಟೆಯವರೆಗೆ ದರ್ಶನ ಮುಂದುವರೆಯಲಿದೆ. ಇದಾದ ನಂತರ ವಾಡಿಕೆಯಂತೆ ಭೋಗ್ ಮತ್ತು ಶಯನ ಆರತಿ ನಡೆಯಲಿದೆ.

    ಶ್ರೀರಾಮ ನವಮಿಯಂದು ಶಯನ ಆರತಿಯ ನಂತರ, ದೇವಾಲಯದಿಂದ ನಿರ್ಗಮಿಸುವಾಗ ಪ್ರಸಾದಗಳು ಲಭ್ಯವಿರುತ್ತವೆ. ದೇವರಿಗೆ 56 ಬಗೆಯ ಭೋಗ್ ಪ್ರಸಾದವನ್ನು ಅರ್ಪಿಸಲಾಯಿತು.

    ರಾಮಮಂದಿರದಿಂದ ಲೈವ್ ಸ್ಟ್ರೀಮಿಂಗ್: ಸುಗ್ರೀವ ಕೋಟೆಯ ಕೆಳಗೆ, ಬಿರ್ಲಾ ಧರ್ಮಶಾಲಾ ಮುಂಭಾಗದಲ್ಲಿ, ಶ್ರೀರಾಮ ಜನ್ಮಭೂಮಿ ಪ್ರವೇಶದ್ವಾರದಲ್ಲಿ, ದೇವಾಲಯದ ಟ್ರಸ್ಟ್‌ನಿಂದ ಪ್ರಯಾಣಿಕರ ಸೇವಾ ಕೇಂದ್ರವನ್ನು ಸ್ಥಾಪಿಸಲಾಗಿದೆ, ಇದರಲ್ಲಿ ಸಾರ್ವಜನಿಕ ಸೌಲಭ್ಯಗಳು ಲಭ್ಯವಿದೆ. ಭಕ್ತರಿಗೆ ಆಸನದಿಂದ ಹಿಡಿದು ಚಿಕಿತ್ಸೆ ನೀಡುವವರೆಗೆ ವ್ಯವಸ್ಥೆ ಮಾಡಲಾಗಿದೆ. ಅಯೋಧ್ಯೆ ಮುನ್ಸಿಪಲ್ ಕಾರ್ಪೊರೇಷನ್ 100 ಸ್ಥಳಗಳಲ್ಲಿ ಎಲ್ಇಡಿ ಪರದೆಯ ಮೂಲಕ ದೇವಾಲಯದಲ್ಲಿ ನಡೆಸುವ ಎಲ್ಲಾ ಕಾರ್ಯಕ್ರಮಗಳ ನೇರ ಪ್ರಸಾರವನ್ನು ಮಾಡಲಾಗುತ್ತಿದೆ.

    ನೆನೆದವರ ಮನೆಯಲ್ಲಿ ಕೊಂಡಾಡಿ ಶ್ರೀರಾಮ ಮಂಡಳಿ ಭಜನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts