More

    ನೆನೆದವರ ಮನೆಯಲ್ಲಿ ಕೊಂಡಾಡಿ ಶ್ರೀರಾಮ ಮಂಡಳಿ ಭಜನೆ

    ಪ್ರಶಾಂತ ಭಾಗ್ವತ, ಉಡುಪಿ
    ಎಲ್ಲೆಡೆಯೂ ಭಜನಾ ಮಂಡಳಿಗಳು ಇರುವುದು ಸಹಜ. ಆದರೆ, ಉಡುಪಿ ತಾಲೂಕಿನ ಹಿರಿಯಡ್ಕ ಸಮೀಪದ ಕೊಂಡಾಡಿ ಭಜನೆಕಟ್ಟೆಯ ಶ್ರೀರಾಮ ಭಜನಾ ಮಂಡಳಿ, ಭಜನೆಗೆ ಹೊಸ ರೂಪ ನೀಡಿದೆ.

    2023ರ ಏ.2ರಂದು “ನೆನೆದವರ ಮನೆಯಲ್ಲಿ ಭಜನೆ’ ಎಂಬ ವಿಶಿಷ್ಟ ಕಾರ್ಯಕ್ರಮ ಆರಂಭಿಸಿದ್ದು, ಕೇಮಾರು ಮಠಾಧೀಶ ಈಶ ವಿಠ್ಠಲದಾಸ ಸ್ವಾಮೀಜಿ ಅಂದು ಲಾಂಛನ ಬಿಡುಗಡೆ ಮೂಲಕ ಚಾಲನೆ ನೀಡಿದ್ದರು. ಪ್ರಸಕ್ತ ಏ.17ರ ಶ್ರೀರಾಮ ನವಮಿಯಂದು ಈ ಭಜನಾ ಮಂಡಳಿಯು ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು, ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ.

    ಏನಿದು ಮನೆ ಭಜನೆ?

    ಮದುವೆಯ ಮೆಹಂದಿ ಕಾರ್ಯಕ್ರಮ, ಜನ್ಮದಿನ, ವಿವಾಹ ವಾರ್ಷಿಕೋತ್ಸವ, ವರ್ಧಂತಿ ಹಾಗೂ ವಿವಿಧ ಶುಭ ಸಮಾರಂಭಗಳಲ್ಲಿ ಮನೆಯವರ ಇಚ್ಛಾನುಸಾರ ತೆರಳಿ ಭಜನಾ ಸೇವೆ ನೀಡಿ, ಅವರ ಕಾರ್ಯಕ್ರಮಗಳಿಗೆ ಹೊಸ ಮೆರಗು ನೀಡುತ್ತಾರೆ. ಕಾರ್ಯಕ್ರಮಕ್ಕೆ ಆಗಮಿಸಿದವರೂ ಸಹ ಭಜನೆಗೆ ಚಪ್ಪಾಳೆ ತಟ್ಟುತ್ತ ಧ್ವನಿ ಸೇರಿಸಿ, ದೇವರ ಭಕ್ತಿಯಲ್ಲಿ ತಲ್ಲೀನರಾಗುವಂತೆ ಮಾಡುತ್ತಾರೆ.

    74ಕ್ಕೂ ಹೆಚ್ಚು ಕಾರ್ಯಕ್ರಮ

    ‘ನೆನೆದವರ ಮನೆಯಲ್ಲಿ ಭಜನೆ’ ಕಾರ್ಯಕ್ರಮ ಇದೀಗ ಜನಪ್ರಿಯವಾಗಿದೆ. ಅನೇಕರು ತಮ್ಮ ಜನ್ಮದಿನ ಹಾಗೂ ವಿವಾಹ ಮಹೋತ್ಸವದ ದಿನದಂದು ಇವರನ್ನು ಮನೆಗೆ ಕರೆಸಿ ಭಜನೆ ಮಾಡಿಸುತ್ತಿದ್ದಾರೆ. ಸಿನಿಮಾ ಹಾಡುಗಳ ಮೊರೆ ಹೋಗುತ್ತಿದ್ದ ಜನರೀಗ ಭಜನೆಯತ್ತಲೂ ಆಕರ್ಷಿತರಾಗಿದ್ದಾರೆ. ಪುರುಷ&ಮಹಿಳಾ ಹಾಗೂ ಮಕ್ಕಳ ಪ್ರತ್ಯೇಕ ಭಜನಾ ತಂಡವೂ ಇದ್ದು, ಕಳೆದ ಒಂದು ವರ್ಷದಲ್ಲಿ 74ಕ್ಕೂ ಹೆಚ್ಚು ಮನೆಗಳಲ್ಲಿ ಭಜನಾ ಸೇವೆ ನೀಡಿದ್ದಾಗಿ ಕೋಶಾಧಿಕಾರಿ ಜಯರಾಂ ಆಚಾರ್ಯ ತಿಳಿಸಿದ್ದಾರೆ.

    ಧಾರ್ಮಿಕ ಸ್ಪರ್ಶ

    ಭಜನಾ ಸೇವೆ ನಡೆಸುವ ಪ್ರತಿ ಮನೆಯವರಿಗೂ ದಾಸವರೇಣ್ಯ ಪುರಂದರ ದಾಸರ ಭಜನಾ ಪುಸ್ತಕ ನೀಡಿ, ತಮ್ಮೊಂದಿಗೆ ಭಜನೆ ಮಾಡಲೂ ಅವಕಾಶ ಕಲ್ಪಿಸುತ್ತಾರೆ. ಭಜನೆ ಮುಗಿದ ಬಳಿಕ ಆ ಮನೆಯ ಜನರಿಗಾಗಿ ದೀರ್ಘಾಯುಷ್ಯ, ಸಕಲ ಇಷ್ಟಾರ್ಥ ಕರುಣಿಸುವಂತೆ, ಸಮಸ್ತ ಲೋಕಕ್ಕೆ ಒಳಿತಾಗಲೆಂದು ಶ್ರೀರಾಮಚಂದ್ರನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಎಲ್ಲರಿಗೂ ಹರಸಿ ಬರುತ್ತೇವೆ ಎಂದು ಭಜನಾ ತಂಡದ ಅಧ್ಯಕ್ಷ ನಿತೀಶ್​ ಕುಮಾರ್​ ತಿಳಿಸಿದ್ದಾರೆ.

    ಭಜನೆಕಟ್ಟೆಗಿದೆ ಶತಮಾನಗಳ ಇತಿಹಾಸ

    ಕೊಂಡಾಡಿ ಭಜನೆಕಟ್ಟೆಯ ಶ್ರೀರಾಮ ಭಜನಾ ಮಂಡಳಿ 50 ವರ್ಷದ ಹಿಂದೆ ಶ್ರೀರಾಮ ನವಮಿಯಂದೇ ಸಂಟನೆಯಾಗಿ ರೂಪುಗೊಂಡಿದೆ. ಆದರೆ, ಕೊಂಡಾಡಿಯ ರಸ್ತೆಗೆ ತಾಗಿಯೇ ಇರುವ ಭಜನೆಕಟ್ಟೆಗೆ ಶತಮಾನಗಳ ಇತಿಹಾಸವಿದೆ. 200ಕ್ಕೂ ಹೆಚ್ಚು ವರ್ಷದ ಹಿಂದೆ ಭಜನೆಕಟ್ಟೆಯಲ್ಲಿ ಗ್ರಾಮದವರು ನಿತ್ಯ ಭಜನೆ ಮಾಡುತ್ತಿದ್ದರು. ಸೂಯೋರ್ದಯಕ್ಕಿಂತ ಮೊದಲು ಲಾಟಿನ್​ ಇಟ್ಟುಕೊಂಡು ಅದರ ಸುತ್ತಲೂ ಕುಣಿತ ಭಜನೆ ಮಾಡುತ್ತಿದ್ದರು. ಹೀಗಾಗಿ ನಾವು ತಂಡ ಕಟ್ಟಿಕೊಂಡು ಭಜನಾ ಸಂಪ್ರದಾಯ ಮುಂದುವರಿಸಿದ್ದೇವೆ. ಮನೆ ಭಜನೆಗೆ ಯಾವುದೇ ಶುಲ್ಕ ಇಲ್ಲ. ಅವರೇ ಮನಸಾರೆ ಕೊಟ್ಟರೆ ಅದನ್ನು ತಂಡದ ನಿರ್ವಹಣೆಗೆ ಬಳಸಿಕೊಳ್ಳುತ್ತೇವೆ ಎನ್ನುತ್ತಾರೆ ಸುವರ್ಣ ಮಹೋತ್ಸವ ಕಾರ್ಯಕ್ರಮದ ಗೌರವಾಧ್ಯಕ್ಷ ಲಕ್ಷಿ$್ಮನಾರಾಯಣ ತಂತ್ರಿ.

    ಇತ್ತೀಚೆಗೆ ಜನರು ದೇವರ ಸ್ಮರಣೆ ಮಾಡುವುದನ್ನು ಮರೆತಿದ್ದು, ದೇವರನ್ನು ನೆನೆಯಲಿ ಎಂಬ ಕಾರಣದಿಂದ “ನೆನೆದವರ ಮನೆಯಲ್ಲಿ ಭಜನೆ’ ಮಾಡುತ್ತಿದ್ದೇವೆ. ಏ.14ರಿಂದ 18ರ ವರೆಗೆ ಶ್ರೀರಾಮ ನವಮಿ ನಿಮಿತ್ತ ಅಖಂಡ ಭಜನಾ ಮಂಗಲೋತ್ಸವ ಹಮ್ಮಿಕೊಂಡಿದ್ದು, 55 ಭಜನಾ ಮಂಡಳಿಗಳು ನಿರಂತರ 50 ಗಂಟೆ ಕಾಲ ಭಜನೆ ಮಾಡಲಿವೆ. ಮನೆ ಭಜನೆಗಾಗಿ ಮೊ.ಸಂ. 9845662314 ಸಂಪರ್ಕಿಸಬಹುದು.

    ವಿಜಯ್​ ಶೆಟ್ಟಿ.
    ಪ್ರ.ಕಾರ್ಯದರ್ಶಿ, ಸುವರ್ಣ ಮಹೋತ್ಸವ ಸಮಿತಿ, ಕೊಂಡಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts