ವಿಜಯವಾಣಿ ಸುದ್ದಿಜಾಲ ಉಡುಪಿ
ಇತಿಹಾಸ ಪ್ರಜ್ಞೆ, ಅಧ್ಯಯನ, ಅಧ್ಯಾಪನ, ಸಂಶೋಧನೆ, ಪುಸ್ತಕ ಪ್ರಕಟಣೆ ಹೀಗೆ ಎಲ್ಲ ವಿಶೇಷತೆಯನ್ನು ಹೊಂದಿದ ಅಪರೂಪದ ವ್ಯಕ್ತಿತ್ವ ದಿ.ಡಾ. ಪಿ.ಗುರುರಾಜ ಭಟ್ ಅವರದು. ಕರಾವಳಿ ಕರ್ನಾಟಕದ ಇತಿಹಾಸದ ಪಿತಾಮಹ ಅವರು ಎಂದು ಇತಿಹಾಸ ತಜ್ಞೆ, ಎಂಜಿಎಂ ಕಾಲೇಜಿನ ಇತಿಹಾಸ ವಿಭಾಗದ ಮಾಜಿ ಮುಖ್ಯಸ್ಥೆ ಡಾ. ಮಾಲತಿ ಕೆ. ಮೂರ್ತಿ ಅಭಿಮತ ವ್ಯಕ್ತಪಡಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಇತಿಹಾಸಕಾರ, ಶ್ರೇಷ್ಠ ಶಿಕ್ಷಣ ತಜ್ಞ ಡಾ. ಪಿ.ಗುರುರಾಜ್ ಭಟ್ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ಅರ್ಚಿಸಿ ಮಾತನಾಡಿದರು.
ತುಳುನಾಡ ಇತಿಹಾಸ
ತುಳುನಾಡ ಇತಿಹಾಸದ ಸಂಶೋಧನಾ ಕ್ಷೇತ್ರದಲ್ಲಿ ಅತ್ಯಂತ ಮೇಲ್ಮಟ್ಟದ ಸಾಧನೆ ಮಾಡಿದ್ದಾರೆ. ಮಿಲಾಗ್ರೀಸ್ ಕಾಲೇಜಿನಲ್ಲಿ ಉತ್ಯುತ್ತಮ ಇತಿಹಾಸ ಅಧ್ಯಯನ ಕೇಂದ್ರವಿದ್ದು ಅದಕ್ಕೆ ಕಾರಣ ಗುರುರಾಜ್ ಭಟ್ ಅವರು. ಅವರ ಕುರಿತು ಹೇಳುವುದೆಂದರೆ ಸಮುದ್ರದ ನೀರನ್ನು ಬೊಗಸೆಯಲ್ಲಿ ಹಿಡಿದು ಹೇಳಿದಂತಾಗುತ್ತದೆ. ಅವರು ಇತಿಹಾಸದ ಸಾಗರ. ನಾನು ಅವರ ನೇರ ವಿದ್ಯಾರ್ಥಿಯಾಗಿದ್ದೆ ಎನ್ನುವುದು ಈ ಸಂದರ್ಭದಲ್ಲಿ ಸಂತಸ ಮೂಡಿಸುತ್ತಿದೆ ಎಂದರು.
ಎಜಿಇ ಮಣಿಪಾಲದ ಕಾರ್ಯದರ್ಶಿ ಬಿ.ಪಿ. ವರದರಾಜ ಪೈ ಅಧ್ಯಕ್ಷತೆ ವಹಿಸಿದ್ದರು. ಆರ್ಜಿ ಪೈ ರಿಸರ್ಚ್ ಸೆಂಟರ್ ಉಡುಪಿಯ ಎಒ ಡಾ. ಬಿ.ಜಗದೀಶ್ ಶೆಟ್ಟಿ, ಐಕ್ಯುಎಸಿಯ ಶೈಲಜಾ ಎಚ್., ಕನ್ನಡ ವಿಭಾಗದ ಪ್ರೊ. ವಿದ್ಯಾನಾಥ ಕೆ. ಉಪಸ್ಥಿತರಿದ್ದರು.
ಪ್ರಾಧ್ಯಾಪಕಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಪ್ರಾರ್ಥಿಸಿದರು. ಪ್ರೊ. ಸುಬೋಧ್ ಬಿ. ಪೈ ಸ್ವಾಗತಿಸಿದರು. ಪ್ರಾಂಶುಪಾಲ ಡಾ. ಲಕ್ಷಿ$್ಮ ನಾರಾಯಣ ಕಾರಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕಿ ಲತಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಡಾ. ಪಿ. ಗುರುರಾಜ ಭಟ್ ಅವರ ಮಕ್ಕಳಾದ ಪರಶುರಾಮ್ ಭಟ್, ವಿಶ್ವನಾಥ್ ಹಾಗೂ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು.