

Karur stampede: ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್ ರ್‍ಯಾಲಿಯಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರ (ಸೆ. 29) ಬೆಳಗ್ಗೆ 41ಕ್ಕೆ ಏರಿಕೆಯಾಗಿದೆ. ಇದೇ ವೇಳೆ ನಟ ದಳಪತಿ ವಿಜಯ್ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು ಪೊಲೀಸರು ಪರಿಶೀಲಿಸಿದ್ದಾರೆ ಎಂದು ವರದಿಯಾಗಿದೆ.
ಕಾಲ್ತುಳಿತದಲ್ಲಿ ಗಂಭೀರವಾಗಿ ಗಾಯಗೊಂಡು ಕರೂರ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 65 ವರ್ಷದ ಸುಗುಣ ಎಂಬ ಮಹಿಳೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಮೃತಪಟ್ಟ 41 ಜನರಲ್ಲಿ 18 ಮಹಿಳೆಯರು ಮತ್ತು 10 ಮಕ್ಕಳು ಸೇರಿದ್ದಾರೆ. ಮೃತರ ಮೃತದೇಹಗಳನ್ನು ಅವರ ಸಂಬಂಧಿಕರು ಗುರುತಿಸಿದ ಬಳಿಕ ಅವರಿಗೆ ಹಸ್ತಾಂತರಿಸಲಾಗಿದೆ.
ನಟ ದಳಪತಿ ವಿಜಯ್ ಮನೆಗೆ ಬಾಂಬ್ ಬೆದರಿಕೆ
ಏತನ್ಮಧ್ಯೆ, ಇಂದು ಮುಂಜಾನೆ ಟಿವಿಕೆ ಮುಖ್ಯಸ್ಥ ನಟ ದಳಪತಿ ವಿಜಯ್ ಅವರ ಚೆನ್ನೈನ ನೀಲಂಕರೈನ ಪೂರ್ವ ಕರಾವಳಿ ರಸ್ತೆ (ಇಸಿಆರ್) ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ಅನಾಮಧೇಯ ವ್ಯಕ್ತಿಯೊಬ್ಬರು ಮನೆಯಲ್ಲಿ ಸ್ಫೋಟಕ ಸಾಧನದ ಇರಿಸಿದ್ದಾಗಿ ಕರೆ ಮಾಡಿದ್ದಾರೆ ಎನ್ನಲಾಗಿದೆ.
ಬಾಂಬ್ ಬೆದರಿಕೆ ಕರೆ ಬಳಿಕ, ಚೆನ್ನೈ ಪೊಲೀಸರು ವಿಜಯ್ ನಿವಾಸಕ್ಕೆ ಧಾವಿಸಿ ಇಡೀ ಮನೆ ಮತ್ತು ಸುತ್ತಮುತ್ತಲೂ ಪ್ರದೇಶವನ್ನು ತಪಾಸಣೆ ನಡೆಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಮತ್ತು ಸ್ನಿಫರ್ ನಾಯಿಗಳು ಆವರಣದ ಒಳಗೆ ಮತ್ತು ಹೊರಗೆ ಸಂಪೂರ್ಣ ಶೋಧ ನಡೆಸಿವೆ. ಆದರೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಎಂ ಎಂ.ಕೆ.ಸ್ಟಾಲಿನ್ & ದಳಪತಿ ವಿಜಯ್ಗೆ ರಾಹುಲ್ ಗಾಂಧಿ ಕರೆ
ಕರೂರಿನಲ್ಲಿ ರ್‍ಯಾಲಿ ವೇಳೆ ನಡೆದ ಕಾಲ್ತುಳಿತ ದುರಂತದ ಬಳಿಕ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಮತ್ತು ಟಿವಿಕೆ ಮುಖ್ಯಸ್ಥ ವಿಜಯ್ಗೆ ಕಾಲ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಸಿಎಂ ಸ್ಟಾಲಿನ್, ರಾಹುಲ್ ಗಾಂಧಿಯವರು ಫೋನ್ ಕರೆಯಲ್ಲಿ ಮಾತನಾಡಿದ್ದು, ಕರೂರಿನ ಕಾಲ್ತುಳಿತ ಘಟನೆ ಮತ್ತು ಗಾಯಾಳುಗಳ ಬಗ್ಗೆ ವಿಚಾರಿಸಿದ್ದಾರೆ. ಅವರ ಹೃದಯಪೂರ್ವಕ ಕಾಳಜಿ ಮತ್ತು ಬೆಂಬಲಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ.
ಹಾಗೆಯೇ ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಮುಖ್ಯಸ್ಥ ದಳಪತಿ ವಿಜಯ್ಗೆ ರಾಹುಲ್ ಗಾಂಧಿ ಕರೆ ಮಾಡಿ ಮಾತಾಡಿದ್ದು, ಅಭಿಮಾನಿಗಳ ಸಾವಿಗೆ ಸಂತಾಪ ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. (ಏಜೆನ್ಸೀಸ್)