ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವ : ಕರ್ನೂರು ಬಾಣಂತಿ ಸಾವು

New Project (53)
Published on

ಪುತ್ತೂರು ಗ್ರಾಮಾಂತರ: ಹೆರಿಗೆ ಬಳಿಕ ತೀವ್ರ ರಕ್ತಸ್ರಾವ ಉಂಟಾಗಿ ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ನಿವಾಸಿಯಾದ ಬಾಣಂತಿಯೊಬ್ಬರು ಮೃತಪಟ್ಟಿದ್ದು, ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಅಳಿಕೆ ನಿವಾಸಿ ಮೊಹಮ್ಮದ್ ಬಶೀರ್ ಕೆ.ಎಂ. ಅವರ ಪತ್ನಿ ಆಯಿಷತ್ ಸೌಜಾನ (26) ಮೃತಪಟ್ಟವರು.

ಮೊಹಮ್ಮದ್ ಬಶೀರ್ ಅವರು ತನ್ನ ಗರ್ಭಿಣಿ ಪತ್ನಿ ಆಯಿಷತ್ ಸೌಜಾನ ಅವರನ್ನು ಎರಡನೇ ಹೆರಿಗೆಗಾಗಿ ಕಾಸರಗೋಡಿನ ಸರ್ಕಾರಿ ಆಸ್ಪತ್ರೆಗೆ ಜೂನ್ 27ರಂದು ದಾಖಲಿಸಿದ್ದರು. ಕಾವಿನ ಜುಬೈದಾ ಎಂಬುವರ ಆರೈಕೆಗಾಗಿ ಆಕೆಯ ಜತೆಗಿದ್ದರು. ಜುಲೈ 1ರಂದು ಮುಂಜಾನೆ ಆಯಿಷತ್ ಸೌಜಾನ ಅವರು ಸಾಮಾನ್ಯ ಹೆರಿಗೆ ಮೂಲಕ ಗಂಡು ಶಿಶುವಿಗೆ ಜನ್ಮ ನೀಡಿದ್ದರು. ಆ ಬಳಿಕ ಆಕೆಗೆ ತೀವ್ರ ರಕ್ತಸ್ರಾವ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕಾಸರಗೋಡು ಸರ್ಕಾರಿ ಆಸ್ಪತ್ರೆ ವೈದ್ಯರ ಸಲಹೆ ಮೇರೆಗೆ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ದಾಖಲಿಸಲಾಗಿತ್ತು. ಆದರೆ ಸೌಜಾನ ಅವರು ಚಿಕಿತ್ಸೆಗೆ ಸ್ಪಂದಿಸದೆ ತೀವ್ರ ರಕ್ತಸ್ರಾವದಿಂದಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net