15 ಸಾವಿರ ರೋಗಿಗಳಿಗೆ ಉಚಿತ ಚಿಕಿತ್ಸೆ : ಡಾ.ನಾಗರಾಜ ಶೇಟ್ ಮಾಹಿತಿ

New Project (47)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಆಸ್ಪತ್ರೆ ಯಶಸ್ಸಿನಲ್ಲಿ ವೈದ್ಯರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಕಳೆದ ವರ್ಷ ಆಸ್ಪತ್ರೆಯಲ್ಲಿ 15 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಸರ್ಕಾರ ಮತ್ತು ಅರೆಸರ್ಕಾರಿ ಯೋಜನೆಗಳಡಿಯಲ್ಲಿ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ನೀಡಲಾಗಿದೆ ಎಂದು ಯೇನೆಪೊಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ ಶೇಟ್ ಹೇಳಿದರು.

ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಯೇನೆಪೊಯ(ಪರಿಗಣಿಸಲ್ಪಟ್ಟ) ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಮಾತನಾಡಿ, ಆಸ್ಪತ್ರೆಯಲ್ಲಿ ತಂತ್ರಜ್ಞಾನ ಆಧರಿತ ಹಾಗೂ ಉನ್ನತ ಗುಣಮಟ್ಟದ ಚಿಕಿತ್ಸೆ ಅತ್ಯಂತ ಕಡಿಮೆ ವೆಚ್ಚದಲ್ಲಿ ನೀಡುತ್ತಿರುವುದರ ಹಿಂದಿನ ಶಕ್ತಿ ವೈದ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಮಾತ್ರವಲ್ಲದೆ ಇತರ ರಾಜ್ಯಗಳಲ್ಲಿಯೂ ಆಸ್ಪತ್ರೆ ಸೇವೆ ಗುರುತಿಸಲ್ಪಟ್ಟಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ರಾಷ್ಟ್ರಮಟ್ಟದಲ್ಲಿ ಪರಿಚಯ ಪಡೆಯುವ ಗುರಿಯೊಂದಿಗೆ ನಾವು ಮುಂದುವರಿಯುತ್ತಿದ್ದೇವೆ ಎಂದರು.

ಯೇನೆಪೊಯ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಹಬೀಬ್ ರಹಮಾನ್ ಎ.ಎ. ಅಧ್ಯಕ್ಷತೆ ವಹಿಸಿದ್ದರು. ಯೇನೆಪೊಯ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಎಂ.ವಿಜಯಕುಮಾರ್, ಕುಲಸಚಿವ ಡಾ.ಕೆ.ಎಸ್.ಗಂಗಾಧರ ಸೋಮಯಾಜಿ, ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಎಂ.ಎಸ್.ಮೂಸಬ್ಬ, ಡಾ.ಅಬುಸಾಲಿ ಎ.ಪಿ., ಡಾ.ಸಿ.ಪಿ.ಅಬ್ದುಲ್ ರಹ್ಮಾನ್, ಪರೀಕ್ಷಾ ನಿಯಂತ್ರಕ ಡಾ.ಬಿ.ಟಿ.ನಂದೀಶ್, ಉಪಪ್ರಾಂಶುಪಾಲ ಡಾ.ಪ್ರಕಾಶ್ ಸಲ್ದಾನ್ಹಾ, ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ.ಮಾಜಿ ಜೋಸ್ ಮೊದಲಾದವರು ಉಪಸ್ಥಿತರಿದ್ದರು.

ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಉಪವ್ಯವಸ್ಥಾಪಕ ನೆಲ್ವಿನ್ ನೆಲ್ಸನ್ ಸ್ವಾಗತಿಸಿದರು. ಅರಿವಳಿಕೆ ವಿಭಾಗದ ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ.ಮುಖ್ತಾರ್ ಅಬ್ದುಲ್ಲಾ ವಂದಿಸಿದರು.

ಗೌರವ : ಯೇನೆಪೊಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಲ್ಲಿಸಿದ ಸೇವೆಗಾಗಿ ಡಾ.ಅಬುಸಾಲಿ ಎ.ಪಿ., ಡಾ.ಸಿ.ಪಿ.ಅಬ್ದುಲ್ ರಹ್ಮಾನ್ ಮತ್ತು ಡಾ.ಪಿ.ಎಸ್.ಎಂ.ಆಮೀರ್ ಅಲಿ ಅವರನ್ನು ಗೌರವಿಸಲಾಯಿತು. ಸಹಾನುಭೂತಿಯೊಂದಿಗೆ ಸೇವೆ: ಪ್ರಾಪ್ತವಾದ ಆರೋಗ್ಯ ಸೇವೆಗಳು ವೈದ್ಯರ ಉದ್ಯೋಗ ತೃಪ್ತಿಗೆ ಹೇಗೆ ಪ್ರಭಾವ ಬೀರುತ್ತವೆ ಎಂಬ ವಿಷಯದಲ್ಲಿ ಆಯೋಜಿಸಲಾದ ಲೇಖನ ಸ್ಪರ್ಧೆಯಲ್ಲಿ ವಿಜೇತರಾದ ಡಾ.ಚಾಂದಿನಿ ಎಸ್., ಡಾ.ಉಮಾ ಕುಲಕರ್ಣಿ ಮತ್ತು ಡಾ.ಸೌರಭಾ ಭಟ್ ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net