

ಬೆಂಗಳೂರು: ಕೋವಿಡ್ ಹಿನ್ನಲೆಯಲ್ಲಿ ಸಾರ್ವಜನಿಕರ ಸಂಪರ್ಕಗಳನ್ನು ಪತ್ತೆ ಹಚ್ಚಲು ರೂಪಿಸಲಾಗಿರುವ ‘ಆರೋಗ್ಯ ಸೇತು’ ಮೊಬೈಲ್ ಆಪ್ ಬಳಕೆಯನ್ನು ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ತನ್ನ ನೌಕರರು ಮತ್ತು ಸಂದರ್ಶಕರಿಗೆ ಕಡ್ಡಾಯಗೊಳಿಸಿ ಅಧಿಸೂಚನೆ ಹೊರಡಿಸಿದೆ ಎಂಬ ವಿಚಾರದ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಆರೋಗ್ಯ ಸೇತು ಆಪ್ ಕಡ್ಡಾಯಗೊಳಿಸಲಾಗಿದೆ ಎಂದು ಆಕ್ಷೇಪಿಸಿ ಬೆಂಗಳೂರಿನ ನಿವಾಸಿ ಅನಿವರ್ ಎ. ಅರವಿಂದ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆ ಎ.ಎಸ್. ಓಕ್ ಹಾಗೂ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಇದನ್ನೂ ಓದಿ: ಕನ್ನಡದ ಹಿರಿಯ ಪೋಷಕ ನಟ ಹುಲಿವಾನ್ ಗಂಗಾಧರಯ್ಯ ನಿಧನ
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ, ದೆಹಲಿ ಸೇರಿ ದೇಶದ ಹಲವು ಹೈಕೋರ್ಟ್ಗಳಲ್ಲಿ ಅರ್ಜಿ ದಾಖಲಾಗಿದೆ. ಆ ಅರ್ಜಿಗಳು ಯಾವ ಹಂತದಲ್ಲಿವೆ ಎಂಬ ಮಾಹಿತಿ ಪಡೆದುಕೊಂಡು ಕರ್ನಾಟಕದಲ್ಲಿ ಸಲ್ಲಿಕೆಯಾಗಿರುವ ಅರ್ಜಿ ಮತ್ತು ಆರೋಗ್ಯ ಸೇತು ಆಪ್ ಬಳಕೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ ಎಂಬ ಅರ್ಜಿದಾರರ ಆಕ್ಷೇಪಣೆಗೆ ಸ್ಪಷ್ಟನೆ ನೀಡಲು 3 ವಾರಗಳ ಕಾಲಾವಕಾಶ ಬೇಕು ಎಂದು ಕೇಂದ್ರ ಸರ್ಕಾರದ ಪರ ವಕೀಲರು ಕೋರಿದರು. ಮನವಿ ಪರಿಗಣಿಸಿದ ಪೀಠ, ಮುಂದಿನ ವಿಚಾರಣೆ ವೇಳೆ ಈ ಬಗ್ಗೆ ಸ್ಪಷ್ಟನೆ ನೀಡಿ ಎಂದು ಸೂಚಿಸಿ ವಿಚಾರಣೆಯನ್ನು ಆ. 14ಕ್ಕೆ ಮುಂದೂಡಿತು.
ಬಿಎಂಆರ್ಸಿಎಲ್ಗೆ ನೋಟಿಸ್: ಮೆಟ್ರೋ ರೈಲು ಸಿಬ್ಬಂದಿ ಹಾಗೂ ಪ್ರಯಾಣಿಕರು ಆರೋಗ್ಯ ಸೇತು ಆಪ್ ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿ ಬಿಎಂಆರ್ಸಿಎಲ್ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಬಿಎಂಆರ್ಸಿಎಲ್ಗೆ ನ್ಯಾಯಪೀಠ ನೋಟಿಸ್ ಜಾರಿಗೊಳಿಸಿತು.