ಆಕಾಶನ ಚಿಗುರೀತಲೇ, ಬೇರೆಲ್ಲ ಮುತ್ತಾಯಿತಲೇ ಪರಾಕ್! ಈ ವರ್ಷದ ಕಾರ್ಣಿಕ ನುಡಿಯ ಒಳಾರ್ಥ ಹೀಗಿದೆ… Karnika Nudi

Karnika Nudi
Published on

ಹಾವೇರಿ: ಜಿಲ್ಲೆಯ ಪ್ರಸಿದ್ಧ ಶ್ರೀ ಕ್ಷೇತ್ರಗಳಲ್ಲಿ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದ ಮಾಲತೇಶಸ್ವಾಮಿ ದೇವಸ್ಥಾನವೂ ಒಂದು. ಈ ದೇವರಗುಡ್ಡದ ಗೊರವಯ್ಯ ನುಡಿಯೆಂದ್ರೇ ತುಂಬಾನೇ ಪ್ರಸಿದ್ಧಿ. ಈ ದೇವರು ನುಡಿಯುವ ಭವಿಷ್ಯದ ನುಡಿ ಎಂದೂ ಸುಳ್ಳಾಗಲ್ಲ ಎಂಬ ನಂಬಿಕೆ ಜನರದ್ದು. ಪ್ರತಿವರ್ಷ ಈ ದೇವರು ನುಡಿಯುವ ಕಾರ್ಣಿಕ ನುಡಿ ( Karnika Nudi ) ಗೆ ಲಕ್ಷಾಂತರ ಭಕ್ತರು ಕಾದು ಕುಳಿತಿರುತ್ತಾರೆ.

ಇಂದು ದೇವರಗುಡ್ಡದ ಮಾಲತೇಶ ಸ್ವಾಮಿ ಕಾರ್ಣಿಕೋತ್ಸವ ನಡೆಯಿತು. ಎಂದಿನಂತೆ ಈ ಕಾರ್ಣಿಕೋತ್ಸವದಲ್ಲಿ ದೇವರಗುಡ್ಡದ ಮಾಲತೇಶಸ್ವಾಮಿಯ ಗೊರವಯ್ಯ ನಾಗಪ್ಪಜ್ಜ ಉರ್ಮಿ ಅವರು ವಾರ್ಷಿಕ ಕಾರ್ಣಿಕ ನುಡಿಯನ್ನು ನುಡಿದರು. "ಆಕಾಶನ ಚಿಗುರೀತಲೇ, ಬೇರೆಲ್ಲಾ ಮುತ್ತಾಯಿತಲೇ ಪರಾಕ್" ಎಂಬುದಾಗಿ ಈ ಬಾರಿ ಕಾರ್ಣಿಕ ನುಡಿಯಲಾಯಿತು.

ದಸರಾ ಹಬ್ಬದ ಆಯುಧ ಪೂಜೆಯ ದಿನದಂದು ನುಡಿಯುವ ಕಾರ್ಣಿಕ ನುಡಿ ಇದಾಗಿದೆ. ಇದರ ಅರ್ಥವನ್ನು ದೇವರಗುಡ್ಡದಲ್ಲಿ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸಂತೋಷ್ ಭಟ್ ಗುರೂಜಿ ಅವರು ವಿವರಿಸಿದರು. ಆಕಾಶದತ್ತ ಚಿಗುರಿತಲೆ ಎಂದರೆ ಒಳ್ಳೆಯ ಮಳೆ ಆಗುತ್ತದೆ, ಬೇರೆಲ್ಲ ಮುದ್ದಾಯಿತಲೇ ಅಂದರೆ ರೈತರಿಗೆ ಒಳ್ಳೆಯ ಬೆಳೆ ಬರುತ್ತೆ ಎಂದು ಅರ್ಥ ಮಾಡಿಕೊಳ್ಳಬಹುದು ಎಂದು ಗುರೂಜಿ ವಿಶ್ಲೇಷಣೆ ಮಾಡಿದರು.

ಇನ್ನು ರಾಜಕೀಯ ಆಯಾಮದಲ್ಲಿ ಹೇಳುವುದಾದರೆ ಆಕಾಶದತ್ತ ಚಿಗುರಿತಲೇ ಎಂದರೆ, ಈಗಿರುವ ನಾಯಕತ್ವ ಆಕಾಶದತ್ತ ಚಿಗುರಿಬಿಟ್ಟಿದೆ ಎಂದರ್ಥ. ಬೇರೆಲ್ಲಾ ಮುತ್ತಾಯಿತಲೇ ಎಂದರೆ ಅವರಿಗೆ ಎಲ್ಲರು ಬೆನ್ನೆಲುಬಾಗಿ ನಿಂತಿರೋ ಅರ್ಥ ಕಲ್ಪಿಸುತ್ತದೆ. ಅಂದರೆ, ಈಗಿರುವ ನಾಯಕತ್ವ ಹೇಳಿದನ್ನು ಒಪ್ಪಿಕೊಳ್ತಾರೆ ಎಂದು ಹೇಳಬಹುದು ಎಂದು ಗುರೂಜಿ ವಿಶ್ಲೇಷಣೆ ಮಾಡಿದರು.

ಅಂದಹಾಗೆ ಹಾವೇರಿ ಜಿಲ್ಲೆಯ ರಾಣೆ ಬೆನ್ನೂರು ತಾಲೂಕಿನ ಸುಕ್ಷೇತ್ರ ದೇವರಗುಡ್ಡ ಮಾಲತೇಶ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಕಾರ್ಣಿಕೋತ್ಸವದಲ್ಲಿ ಮಳೆ, ಬೆಳೆ, ರಾಜಕೀಯ, ಅನಾಹುತಗಳ ಬಗ್ಗೆ ಗೊರವಪ್ಪ, ಕಾರ್ಣಿಕ ನುಡಿಯುತ್ತಾರೆ. ಇವರು ನುಡಿಯುವ ಭವಿಷ್ಯವಾಣಿ ನಿಜವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಈ ಕಾರ್ಣಿಕೋತ್ಸವಕ್ಕೂ ಮುನ್ನ ಗೊರವಯ್ಯ 9 ದಿನ ಉಪವಾಸವಿರುತ್ತಾರೆ. ಇಂದು 21 ಅಡಿ ಬಿಲ್ಲನ್ನೇರಿ ಗೊರವಯ್ಯ ನಾಗಪ್ಪಜ್ಜ ಉರ್ಮಿ ಕಾರ್ಣಿಕ ನುಡಿದಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net