ಆರ್​ಸಿಬಿ ಪರ ಮಿಂಚಿರುವ ಕರ್ನಾಟಕದ ವೇಗಿ ಭಾರತ ಟಿ20 ತಂಡಕ್ಕೆ ಆಯ್ಕೆ!

web vyshak
Published on

ಬೆಂಗಳೂರು: ದಕ್ಷಿಣ ಆಫ್ರಿಕಾ ಪ್ರವಾಸದ 4 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡದಲ್ಲಿ ಕರ್ನಾಟಕದ ವೇಗಿ ವೈಶಾಕ್​ ವಿಜಯ್​ಕುಮಾರ್​ ಸ್ಥಾನ ಪಡೆದಿದ್ದಾರೆ. ವೈಶಾಕ್​ಗೆ ಇದು ರಾಷ್ಟ್ರೀಯ ತಂಡಕ್ಕೆ ಚೊಚ್ಚಲ ಕರೆಯಾಗಿದೆ. ಪಂಜಾಬ್​ ಬ್ಯಾಟರ್​ ರಮಣದೀಪ್​ ಸಿಂಗ್​ ಚುಟುಕು ತಂಡಕ್ಕೆ ಮತ್ತೋರ್ವ ಹೊಸ ಸೇರ್ಪಡೆಯಾಗಿದ್ದಾರೆ.

ನವೆಂಬರ್​ 8, 10, 13, 15ರಂದು ಸರಣಿಯ 4 ಪಂದ್ಯಗಳು ನಡೆಯಲಿವೆ. ಮಯಾಂಕ್​ ಯಾದವ್​, ಶಿವಂ ದುಬೆ ಮತ್ತು ರಿಯಾನ್​ ಪರಾಗ್​ ಗಾಯದಿಂದಾಗಿ ತಂಡದಲ್ಲಿ ಸ್ಥಾನ ಪಡೆದಿಲ್ಲ. ಟೆಸ್ಟ್​ ತಂಡದಿಂದ ಹೊರಬಿದ್ದಿರುವ ಅಕ್ಷರ್​ ಪಟೇಲ್​ ಟಿ20 ತಂಡದೊಂದಿಗೆ ದಕ್ಷಿಣ ಆಫ್ರಿಕಾಕ್ಕೆ ತೆರಳಲಿದ್ದಾರೆ. ವೇಗಿ ಯಶ್​ ದಯಾಳ್​ ಕೂಡ ಸ್ಥಾನ ಪಡೆದಿದ್ದಾರೆ.

ದೇಶೀಯ ಕ್ರಿಕೆಟ್​ನಲ್ಲಿ ಕರ್ನಾಟಕ ಮತ್ತು ಐಪಿಎಲ್​ನಲ್ಲಿ ಆರ್​ಸಿಬಿ ಪರ ಗಮನಸೆಳೆದಿರುವ 27 ವರ್ಷದ ವೈಶಾಕ್​, ಬಿಸಿಸಿಐನ ವೇಗದ ಬೌಲರ್​ಗಳ ಗುತ್ತಿಗೆಯನ್ನೂ ಹೊಂದಿದ್ದಾರೆ. ಇತ್ತೀಚೆಗೆ ದುಲೀಪ್​ ಟ್ರೋಫಿಯಲ್ಲೂ ವೈಶಾಕ್​ 10 ವಿಕೆಟ್​ ಕಬಳಿಸಿ ಮಿಂಚಿದ್ದರು.

ಟಿ20 ತಂಡ: ಸೂರ್ಯಕುಮಾರ್​(ನಾಯಕ), ಅಭಿಷೇಕ್​ ಶರ್ಮ, ಸಂಜು ಸ್ಯಾಮ್ಸನ್​, ರಿಂಕು ಸಿಂಗ್​, ತಿಲಕ್​ ವರ್ಮ, ಜಿತೇಶ್​ ಶರ್ಮ, ಹಾರ್ದಿಕ್​ ಪಾಂಡ್ಯ, ಅಕ್ಷರ್​ ಪಟೇಲ್​, ರಮಣ್​ದೀಪ್​ ಸಿಂಗ್​, ವರುಣ್​ ಚಕ್ರವರ್ತಿ, ರವಿ ಬಿಷ್ಣೋಯಿ, ಅರ್ಷದೀಪ್​ ಸಿಂಗ್​, ವೈಶಾಕ್​ ವಿಜಯ್​ಕುಮಾರ್​, ಆವೇಶ್​ ಖಾನ್​, ಯಶ್​ ದಯಾಳ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net