

ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿನ ಬಿಜೆಪಿ ಸೋಲಿಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂಪೂರ್ಣ ಹೊಣೆ ಹೊತ್ತುಕೊಂಡಿದ್ದರು. ಚುನಾವಣೆಯಲ್ಲಿ ಬಿಜೆಪಿ ಮುಖಾಡೆ ಮಲಗಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಲ್ಲಿರುವ ಕಟೀಲ್ರನ್ನು ಬದಲಾಯಿಸುವ ಸಾಧ್ಯತೆ ಎದ್ದು ಕಾಣುತ್ತಿದೆ.
ಮುಂದಿನ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಮುಂದಿನ ಹೆಜ್ಜೆ ಇಡಲಿರುವ ರಾಜ್ಯ ಬಿಜೆಪಿ ಜಾತಿ ಸಮಿಕರಣದ ಮೇಲೆ ರಾಜ್ಯಾಧ್ಯಕ್ಷ ಮತ್ತು ಪ್ರತಿ ಪಕ್ಷದ ನಾಯಕನ ಆಯ್ಕೆ ಬಗ್ಗೆ ಚಿಂತನೆ ನಡೆಸುತ್ತಿದೆ. ಈಗಾಗಲೇ ಅವಧಿ ಪೂರ್ಣಗೊಂಡಿರುವ ಕಟೀಲರನ್ನು ಬದಲಾವಣೆ ಮಾಡುವಂತೆ ಪಕ್ಷದಲ್ಲೇ ಕೂಗು ಕೇಳಿಬರುತ್ತಿದೆ.
ಎರಡು ಹುದ್ದೆಗಳನ್ನು ಜಾತಿ ಸಮೀಕರಣದ ಆಧಾರದ ಮೇಲೆ ನೇಮಿಸಲು ಪಕ್ಷದಲ್ಲಿ ಚಿಂತನೆ ನಡೆಸಲಾಗುತ್ತಿದ್ದು ಪ್ರತಿಪಕ್ಷ ನಾಯಕನ ಹುದ್ದೆ ಲಿಂಗಾಯತ ಸಮುದಾಯಕ್ಕೆ ನೀಡುವ ಸಾಧ್ಯತೆ ಇದೆ. ರಾಜ್ಯಾದ್ಯಕ್ಷ ಸ್ಥಾನ ಇತರೆ ಹಿಂದುಳಿದ ವರ್ಗ/ಒಕ್ಕಲಿಗ/ದಲಿತ ಸಮುದಾಯಕ್ಕೆ ನೀಡುವ ಸಾಧ್ಯತೆ ಇದೆ.
ಒಂದು ವೇಳೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ಸಮುದಾಯಕ್ಕೆ ನೀಡಿದ್ದೇ ಆದರೆ ಪ್ರತಿಪಕ್ಷ ನಾಯಕ ಹಿಂದುಳಿದ ವರ್ಗಕ್ಕೆ ನೀಡುವ ಸಾಧ್ಯತೆ ಇದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ವರ್ಚಸ್ಸು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗುತ್ತಿದೆ ಎನ್ನಲಾಗುತ್ತಿದೆ.