ಖಾಸಗಿ ಚಟುವಟಿಕೆಗಳಿಗೆ ಪೂರ್ವಾನುಮತಿ ಕಡ್ಡಾಯ; ಸರ್ಕಾರದ ಮೇಲ್ಮನವಿ ವಜಾಗೊಳಿಸಿದ ಹೈಕೊರ್ಟ್​ ದ್ವಿಸದಸ್ಯ ಪೀಠ | Highcourt

highcourt
Published on

ಬೆಂಗಳೂರು: ಸರ್ಕಾರಿ ಜಾಗದಲ್ಲಿ ಖಾಸಗಿ ಸಂಸ್ಥೆಗಳು ಯಾವುದೇ ಚಟುವಟಿಕೆಗಳನ್ನು ನಡೆಸುವ ಮುನ್ನ ಪೂರ್ವಾನುಮತಿ ಪಡೆಯಬೇಕೆಂಬ ಕರ್ನಾಟಕ ಸರ್ಕಾರದ ಆದೇಶಕ್ಕೆ (ಜಿಒ) ಧಾರವಾಡ ಹೈಕೋರ್ಟ್​ ಮಧ್ಯಂತರ ತಡೆಯಾಜ್ಞೆ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್(Highcourt) ಗುರುವಾರ (ನ 6) ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್ ಮತ್ತು ಗೀತಾ ಕೆ.ಬಿ. ಅವರಿದ್ದ ವಿಭಾಗೀಯ ಪೀಠವು, ಮಧ್ಯಂತರ ಆದೇಶ ತೆರವುಗೊಳಿಸಲು ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಲು ನಿರ್ದೇಶನ ನೀಡಿದೆ.

10 ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪನ್ನು ಕಾನೂನುಬಾಹಿರವೆಂದು ಪರಿಗಣಿಸಬಹುದೇ ಎಂದು ಪ್ರಶ್ನಿಸಿದ ಪೀಠ, ಒಟ್ಟಾಗಿ ಹೋಗಬಯಸುವ ಜನರನ್ನು ಸರ್ಕಾರ ತಡೆಯಬಹುದೇ ಎಂದು ಕೇಳಿದ್ದು, ಸರ್ಕಾರ ಮೇಲ್ಮನವಿ ಸಲ್ಲಿಸುವ ಬದಲು ಏಕಸದಸ್ಯ ಪೀಠದಿಂದ ಸ್ಪಷ್ಟೀಕರಣ ಪಡೆಯುವಂತೆ ಸೂಚನೆ ನೀಡಿದೆ.

ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ, ಈ ಆದೇಶವು ರ‍್ಯಾಲಿ ಮತ್ತು ಮೆರವಣಿಗೆಗಳಂತಹ ಸಂಘಟಿತ ಕಾರ್ಯಕ್ರಮಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಅನೌಪಚಾರಿಕ ಸಭೆಗಳಿಗೆ ಅಲ್ಲ, ಪ್ರತಿಭಟನೆಗಳು ಮತ್ತು ಕಾರ್ಯಕ್ರಮಗಳ ಮೇಲೆ ಈಗಾಗಲೇ ನಿರ್ಬಂಧಗಳು ಜಾರಿಯಲ್ಲಿವೆ, ಸರ್ಕಾರ ಈಗಾಗಲೇ ಬೆಂಗಳೂರಿನಲ್ಲಿ ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್‌ಗೆ ಮತ್ತು ಕ್ರೀಡಾಕೂಟಗಳನ್ನು ಕಂಠೀರವ ಕ್ರೀಡಾಂಗಣಕ್ಕೆ ಸೀಮಿತಗೊಳಿಸಿದೆ ಎಂದು ತಿಳಿಸಿದರು.

ಅರ್ಜಿದಾರರಾದ ಪುನಶ್ಚೇತನ ಸೇವಾ ಸಂಸ್ಥೆ ಮತ್ತು ವೀ ಕೇರ್ ಫೌಂಡೇಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ಮೇಲ್ಮನವಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದು, ಶಾಂತಿಯುತ ಸಭೆ ಸೇರುವ ಹಕ್ಕನ್ನು ಖಾತರಿಪಡಿಸುವ 19(1)(ಬಿ) ನೇ ವಿಧಿಯನ್ನು ಈ ವೇಳೆ ಉಲ್ಲೇಖಿಸುತ್ತಾ, ಈ ನಿಯಮದಡಿಯಲ್ಲಿ ಕ್ರಿಕೆಟ್ ಆಡುವ ಗುಂಪಿಗಳಿಗೂ ಸಹ ದೈನಂದಿನ ಅನುಮತಿ ಬೇಕಾಗುತ್ತದೆ ಎಂದು ವಾದಿಸಿದರು.

ಸರ್ಕಾರದ ಆದೇಶ..

ಅಕ್ಟೋಬರ್ 18 ರ ಸರ್ಕಾರದ ಆದೇಶದ ಪ್ರಕಾರ, ನೋಂದಾಯಿತ ಅಥವಾ ನೋಂದಾಯಿತವಲ್ಲದ ಯಾವುದೇ ಖಾಸಗಿ ಸಂಸ್ಥೆಗಳು ರಸ್ತೆಗಳು, ಉದ್ಯಾನವನಗಳು, ಆಟದ ಮೈದಾನಗಳು, ಕಟ್ಟಡಗಳು ಮತ್ತು ಇತರ ಸಾರ್ವಜನಿಕ ಆಸ್ತಿಯಂತಹ ಸರ್ಕಾರಿ ಸ್ಥಳಗಳನ್ನು ಬಳಸಲು ಮೂರು ದಿನಗಳ ಮುಂಚಿತವಾಗಿ ಅನುಮತಿ ಪಡೆಯಬೇಕು. ಸಂಗೀತದೊಂದಿಗೆ 10 ಕ್ಕೂ ಹೆಚ್ಚು ಜನ ಮೆರವಣಿಗೆಗಳಿಗೆ ಅನುಮೋದನೆ ಅಗತ್ಯವಿದ್ದು, ಮದುವೆ ಮತ್ತು ಅಂತ್ಯಕ್ರಿಯೆಯಂತಹ ಕಾರ್ಯಕ್ರಮಗಳಿಗೆ ಇದರಿಂದ ವಿನಾಯಿತಿ ನೀಡಲಾಗುವುದು ಎಂದು ಹೇಳಿದೆ. ಇದನ್ನು ಉಲ್ಲಂಘಿಸಿದರೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿ "ಕಾನೂನುಬಾಹಿರ ಸಭೆ" ಎಂದು ಪರಿಗಣಿಸಲಾಗುತ್ತದೆ. ಪೊಲೀಸ್ ಆಯುಕ್ತರು ಅಥವಾ ಉಪ ಆಯುಕ್ತರಿಗೆ ಪರವಾನಗಿ ನೀಡುವ ಸಕ್ಷಮ ಪ್ರಾಧಿಕಾರವನ್ನಾಗಿ ನೇಮಿಸಲಾಗಿದೆ.

ಸರ್ಕಾರದ ಈ ಕ್ರಮವನ್ನು ಸಂವಿಧಾನಬಾಹಿರ ಎಂದಿದ್ದ ಏಕಸದಸ್ಯ ನ್ಯಾಯಾಧೀಶರ ಆದೇಶವನ್ನು ವಿಭಾಗೀಯ ಪೀಠ ಎತ್ತಿಹಿಡಿದಿದ್ದು, ಸರ್ಕಾರಿ ಆದೇಶವು ಸಂವಿಧಾನವು ಖಾತರಿಪಡಿಸಿದ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ. ಮುಖ್ಯ ಅರ್ಜಿಯ ವಿಚಾರಣೆ ನವೆಂಬರ್ 17 ರಂದು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net