ಸರಿಯಾಗಿ ಮಾಹಿತಿ ಕೊಟ್ಟಿಲ್ಲ ಅಂದ್ರೆ ಫೇಸ್​ಬುಕ್​ ಬಂದ್ ಮಾಡಿಸ್ತೀವಿ ಎಂದ ಕರ್ನಾಟಕ ಹೈಕೋರ್ಟ್!

Facebook
Published on

ಬೆಂಗಳೂರು: ನ್ಯಾಯಾಲಯಗಳು ಕಾನೂನು ಪಾಲನೆಯಲ್ಲಿ ಹಿಂದೆ ಇರುವವರಿಗೆ ಆಗಾಗ ಚಾಟಿ ಬೀಸುತ್ತಿರುವುದು ಎಲ್ಲರಿಗೂ ತಿಳಿದಿದೆ. ಬಡವ, ಶ್ರೀಮಂತರ ವ್ಯತ್ಯಾಸ ನೋಡದೇ ಎಲ್ಲರನ್ನೂ ಸಮಾನವಾಗಿ ನೋಡುವ ನಮ್ಮ ಕರ್ನಾಟಕ ಹೈ ಕೋರ್ಟ್ ಇದೀಗ ಫೇಸ್​ಬುಕ್​ಗೂ ಚುರುಕು ಮುಟ್ಟಿಸಿದೆ.

ಸೌದಿ ಅರೇಬಿಯಾದಲ್ಲಿ ಬಂಧಿತನಾದ ವ್ಯಕ್ತಿಯ ಪ್ರಕರಣದಲ್ಲಿ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂಬ ಕಾರಣಕ್ಕೆ ಫೇಸ್​​ಬುಕ್​ಗೆ ಕರ್ನಾಟಕ ಹೈ ಕೋರ್ಟ್ ಎಚ್ಚರಿಕೆ ನೀಡಿದೆ. ಮಂಗಳೂರು ಪೊಲೀಸರು, ಫೇಸ್​ಬುಕ್ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದ್ದು ಈ ಕಾರಣಕ್ಕೆ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಇದ್ದ ಪೀಠ ಗಂಭೀರ ಎಚ್ಚರಿಕೆ ನೀಡಿದೆ.

ಘಟನೆ ಹಿನ್ನೆಲೆ ಏನು?

ಮಂಗಳೂರಿನ ಬಿಕರನಕಟ್ಟೆ ಮೂಲದ ಶೈಲೇಶ್ ಎಂಬುವರು 2019 ರಲ್ಲಿ NRC CAA ಕಾಯ್ದೆ ಬೆಂಬಲಿಸಿ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ‌ ಅವರಿಗೆ ಬೆದರಿಕೆ ಕರೆಗಳು ಬರಲು ಆರಂಭಿಸಿದ್ದವು. ಈ ಕಾರಣಕ್ಕೆ ಶೈಲೇಶ್ ಫೇಸ್​ಬುಕ್ ನಿಷ್ಕ್ರಿಯಗೊಳಿಸಿದ್ದರು. ಈ ಸಂದರ್ಭದಲ್ಲಿ ಶೈಲೇಶ್ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು.

2020ರಲ್ಲಿ ಶೈಲೇಶ್ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ನಕಲಿ ‌ಖಾತೆ ತೆರೆದು ಸೌದಿ ಅರೇಬಿಯಾ ದೊರೆ ಹಾಗೂ ಧರ್ಮವನ್ನ ಅವಹೇಳನ ಮಾಡಿ ಪೋಸ್ಟ್ ಹಾಕಿದ್ದರು. ಈ ಕಾರಣಕ್ಕೆ ಸೌದಿ ಅರೇಬಿಯಾದಲ್ಲಿ ಶೈಲೇಶ್​ರನ್ನು ಬಂಧಿಸಲಾಗಿತ್ತು.

ಹೀಗಾಗಿ ಕೇಂದ್ರ‌ ಸರ್ಕಾರಕ್ಕೆ ತನ್ನ ಗಂಡನನ್ನು ಬಿಡುಗಡೆ ಮಾಡಿಸಿ ಮನೆಗೆ ಕಳಿಸಿ ಎಂದು ಶೈಲೇಶ್ ಪತ್ನಿ ಮನವಿ ಸಲ್ಲಿಸಿದ್ದರು. ಅದರೊಂದಿಗೆ ಮಂಗಳೂರು ಪೊಲೀಸರಿಗೂ ದೂರು ನೀಡಿದ್ದರು. ಆದರೆ ಇದರ ಬಗ್ಗೆ ಸಮರ್ಪಕ ಕ್ರಮ ತೆಗೆದುಕೊಳ್ಳದ ಹಿನ್ನಲೆಯಲ್ಲಿ ಶೈಲೇಶ್ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ ಫೇಸ್ಬುಕ್​ನಿಂದ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎಂದು ಮಂಗಳೂರು ಪೊಲೀಸರು ಕೋರ್ಟ್​ಗೆ ಮಾಹಿತಿ ನೀಡಿದ್ದಾರೆ. ಈ ಕಾರಣಕ್ಕೆ ಫೇಸ್​ಬುಕ್ ಬಂದ್ ಮಾಡಿಸಬೇಕಾಗುತ್ತೆ ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿದ್ದು ಗರಂ ಆಗಿದೆ.

ಒಂದು ವಾರದಲ್ಲಿ ವರದಿ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಮಂಗಳೂರು ಪೊಲೀಸರಿಗೆ ಸೂಚನೆಯನ್ನು ನ್ಯಾಯಾಲಯ ನೀಡಿದ್ದು ವಿಚಾರಣೆಯನ್ನು 22 ನೇ ತಾರೀಕಿಗೆ ಮುಂದೂಡಿಕೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net