ಬೆಂಗಳೂರು: ವಕ್ಫ್ ಕಾಯ್ದೆ ಅನ್ವಯ ಮಂಡಳಿಯ ಸಿಇಒ ವಕ್ಫ್ ಆಸ್ತಿಗೊಳಪಡುವ ಒತ್ತುವರಿ ಸಂಬಂಧ ದೂರು ಸ್ವೀಕರಿಸುವುದು, ಸಂಬಂಧಪಟ್ಟವರಿಗೆ ನೋಟಿಸ್ ಜಾರಿಗೊಳಿಸುವುದು, ಆಕ್ಷೇಪಣೆ ಸ್ವೀಕರಿಸಿದ ಬಳಿಕ ಒತ್ತುವರಿ ತೆರವು ಮಾಡುವಂತೆ ಆದೇಶಿಸಬಹುದು. ಆದರೆ, ಒತ್ತುವರಿ ತೆರವುಗೊಳಿಸುವ ಪ್ರಕ್ರಿಯೆ ನಡೆಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಿಸಿದದೆ.
ವಕ್ಫ್ ಮಂಡಳಿ ಸೇರಿದ ಜಮೀನಿನ ಒತ್ತುವರಿ ತೆರವುಗೊಳಿಸುವಂತೆ ಮಂಡಳಿಯ ಸಿಇಓ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ನಗರದ ಸಹೇಬಲಾಲ್ ಮತ್ತು ಮುನೋರುದ್ದೀನ್ ಎಂಬುವರು ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಏಕಸದಸ್ಯ ಪೀಠ ಒತ್ತುವರಿಯಾಗಿರುವ ವಕ್ಫ್ ಆಸ್ತಿಗಳನ್ನು ತೆರವುಗೊಳಿಸಲು ವಕ್ಫ್ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಗೆ ಅಧಿಕಾರವಿಲ್ಲ ಎಂದು ಹೇಳಿದೆ.
ವಕ್ಫ್ ಕಾಯ್ದೆ 1955ರ ಸೆಕ್ಷನ್ 54ರ ಸಬ್ ಸೆಕ್ಷನ್ (1)ರ ಅನುಸಾರ ಸಿಇಒ ಒತ್ತುವರಿ ಆರೋಪ ಸಂಬಂಧ ದೂರು ಸ್ವೀಕರಿಸುವುದು, ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವುದು, ಆಗಿರುವ ಒತ್ತುವರಿ ಏಕೆ ತೆರವು ಮಾಡಬಾರದು ಎಂದು ನಿಗದಿತ ದಿನಾಂಕದ ಒಳಗಾಗಿ ಕಾರಣ ನೀಡುವಂತೆ ಶೋಕಾಸ್ ನೋಟಿಸ್ ನೀಡಬಹುದು. ಈ ಸಂಬಂಧ ಮತ್ಯಾವ (ಆಸ್ತಿಗಳ ಮೇಲ್ವಿಚಾರಕ)ಗೆ ಮಾಹಿತಿ ನೀಡಬಹುದು. ಸಬ್ ಸೆಕ್ಷನ್ (3)ರ ಪ್ರಕಾರ ಒತ್ತುವರಿ ಸಂಬಂಧ ವಿಚಾರಣೆ ನಡೆಸಿ ಒತ್ತುವರಿದಾರರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿ ವಕ್ಫ್ ಆಸ್ತಿ ಒತ್ತುವರಿ ಆಗಿದ್ದಲ್ಲಿ ಒತ್ತುವರಿ ತೆರವು ಸಂಬಂಧ ವಕ್ಫ್ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಬೇಕು.
ಸಬ್ ಸೆಕ್ಷನ್ (4)ರ ಪ್ರಕಾರ ನ್ಯಾಯಮಂಡಳಿ ನೀಡುವ ಒತ್ತುವರಿ ತೆರವು ಆದೇಶದ ಕುರಿತು ಫಲಕ ಅಂಟಿಸಬೇಕು. ಸಬ್ ಸೆಕ್ಷನ್(5)ರ ಪ್ರಕಾರ, ನ್ಯಾಯಮಂಡಳಿ ಆದೇಶದಂತೆ ಸಿಇಒ ಮತ್ತು ಅವರಿಂದ ನಿಯೋಜನೆಗೊಂಡ ವ್ಯಕ್ತಿ ಒತ್ತುವರಿ ತೆರವುಗಳಿಸಬಹುದು ಎಂದು ಹೇಳಲಾಗಿದೆ. ಆದರೆ, ಈ ಪ್ರಕ್ರಿಯೆಗೂ ಮುನ್ನ ಒತ್ತುವರಿ ತೆರವು ಮಾಡಿಸಲು ಅವಕಾಶವಿಲ್ಲ ಎಂದು ಪೀಠ ಹೇಳಿದೆ.
ಈ ಪ್ರಕರಣದಲ್ಲಿ ವಕ್ಫ್ ಆಸ್ತಿ ಒತ್ತುವರಿ ಸಂಬಂಧ ದೂರು ದಾಖಲಾಗಿದ್ದು, ಅದಕ್ಕೆ ಸಂಬಂಧಿಸಿ ಸಿಇಒ ಒತ್ತುವರಿದಾರರಿಗೆ ನೋಟಿಸ್ ನೀಡಿದ್ದಾರೆ. ಜತೆಗೆ, ಆಕ್ಷೇಪಣೆಗಳನ್ನು ಸ್ವೀಕರಿಸಿ ಉದ್ದೇಶಿತ ಜಮೀನು ವಕ್ಫ್ ಮಂಡಳಿಗೆ ಸೇರಿರುವುದಾಗಿ ತಿಳಿಸಿ ಒತ್ತುವರಿದಾರರು ತೆರವುಗೊಳಿಸುವಂತೆ ನಿರ್ದೇಶಿಸುವ ಆದೇಶ ಹೊರಡಿಸಿದ್ದಾರೆ. ಈ ಆದೇಶ ತೆರವು ಮಾಡಿಸುವ ಪ್ರಕ್ರಿಯೆ ಪ್ರಾರಂಭಿಸಿದಂತಾಗುವುದಿಲ್ಲ ಎಂದು ಪೀಠ ತಿಳಿಸಿದೆ.
ಅಲ್ಲದೇ, ಒತ್ತುವರಿಯಿಂದ ವಕ್ಫ್ ಮಂಡಳಿಗೆ ಆಗಿರುವ ಹಾನಿಯ ಪ್ರಮಾಣ ನಿರ್ಧರಿಸಲು ಜಿಲ್ಲಾ ವಕ್ಫ್ ಸಲಹಾ ಸಮಿತಿಗೆ ಮನವಿ ಮಾಡಿದ್ದಾರೆ.
ಜತೆಗೆ, ಒತ್ತುವರಿ ಆದೇಶಕ್ಕಾಗಿ ವಕ್ಫ್ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಲು ನಿರ್ದೇಶಿಸಿದ್ದಾರೆ. ಸಿಇಒ ಆದೇಶ ಒತ್ತುವರಿ ತೆರವುಗೊಳಿಸುವ ಆದೇಶಕ್ಕೆ ಸಮನಾಗುವುದಿಲ್ಲ. ಆದ್ದರಿಂದ ಈ ಸಂಬಂಧ ವಕ್ಫ್ ನ್ಯಾಯಮಂಡಳಿ ಸೂಕ್ತ ಆದೇಶ ಹೊರಡಿಸುವವರೆಗೂ ಸಿಇಒ ಅರ್ಜಿದಾರರು ಒತ್ತುವರಿ ಮಾಡಿರುವ ಆರೋಪದ ಆಸ್ತಿಯನ್ನು ವಕ್ಫ್ ಮಂಡಳಿಗೆ ವ್ಯಾಪ್ತಿಗೆ ವಶಪಡಿಸಿಕೊಳ್ಳುವಂತಿಲ್ಲ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿದೆ.