ಬಜೆಟ್​ನಲ್ಲಿ ಯುವ ಹವಾ; ನಿರುದ್ಯೋಗ ನಿವಾರಣೆಗೆ ಕಿರು ಉದ್ಯಮಗಳಿಗೆ ಸರ್ಕಾರದ ಪ್ರೋತ್ಸಾಹ

ವಿಧಾನಸೌಧ
Published on

ರುದ್ರಣ್ಣ ಹರ್ತಿಕೋಟೆ
ಬೆಂಗಳೂರು: ರಾಜ್ಯದಲ್ಲಿ ಜಾರಿಗೆ ತಂದಿರುವ ಯುವ ನೀತಿಯ ಮುಂದುವರಿದ ಭಾಗವಾಗಿ ಮುಂದಿನ ಯುವ ಬಜೆಟ್​ನಲ್ಲಿ ಕಿರು ಉದ್ಯಮಗಳಿಗೆ ಆದ್ಯತೆ ನೀಡುವ ಮೂಲಕ ನಿರುದ್ಯೋಗ ನಿವಾರಣೆಯತ್ತ ಗಮನ ಹರಿಸಲು ಸರ್ಕಾರ ತೀರ್ವನಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೆಬ್ರವರಿ ಮೂರನೇ ವಾರ ತಮ್ಮ ಎರಡನೇ ಆಯವ್ಯಯ ಮಂಡಿಸಲಿದ್ದು, ಯುವ ಬಜೆಟ್​ನ ಮೂಲಕ ರಾಜ್ಯದಲ್ಲಿ ಯುವ ಅಭಿವೃದ್ಧಿಯ ಸೂಚ್ಯಂಕ ಹೆಚ್ಚಿಸಲು ಪ್ರಾಮುಖ್ಯತೆ ನೀಡಲಾಗುತ್ತಿದೆ. ಮೊದಲು ಎಲ್ಲ ಯುವ ಸಂಘಗಳು ನವೋದ್ಯಮಗಳಾಗಬೇಕು ಎಂಬ ಉದ್ದೇಶವಿತ್ತು. ಆದರೆ, ಈಗ ಸದ್ಯಕ್ಕೆ ಕಿರು ಉದ್ಯಮಗಳನ್ನು ಸ್ಥಾಪಿಸಿ ಯುವಕರಲ್ಲಿ ಭರವಸೆ ಮೂಡಿಸಲು ನಿರ್ಧರಿಸಲಾಗಿದೆ.

ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಯುವ ಸಮುದಾಯಕ್ಕೆ ಸಂಬಂಧಿಸಿದ 552 ಯೋಜನೆಗಳಿವೆ. ಅಂದಾಜು 20 ಸಾವಿರ ಕೋಟಿ ರೂ.ಗಳಿಗೂ ಅಧಿಕ ಹಣ ಲಭ್ಯವಾಗುತ್ತದೆ. ಆ ಎಲ್ಲ ಹಣವನ್ನು ಒಂದೆಡೆ ಸೇರಿಸುವ ಮೂಲಕ ಯುವ ಅಭಿವೃದ್ಧಿ ಸೂಚ್ಯಂಕದ ವೃದ್ಧಿಗೆ ಆದ್ಯತೆ ನೀಡಲಾಗುತ್ತದೆ ಎಂದು ಯುವ ಸಬಲೀಕರಣ ಇಲಾಖೆಯ ಮೂಲಗಳು ತಿಳಿಸಿವೆ. ರಾಜ್ಯದ ಜನಸಂಖ್ಯೆಯ ಶೇ.30 ರಷ್ಟು ಯುವ ಜನರಿದ್ದಾರೆ. ಅಂದರೆ ರಾಜ್ಯದಲ್ಲಿ 2.11 ಕೋಟಿ ಯುವಕ-ಯುವತಿಯರಿರಬಹುದೆಂದು ಅಂದಾಜಿಸಲಾಗಿದೆ. ಕಾರ್ವಿುಕ ವಲಯದಲ್ಲಿಯೇ ಶೇ.11 ರಷ್ಟು ನಿರುದ್ಯೋಗ ಇದೆ.

ಆದ್ದರಿಂದಲೇ ಯುವ ಬಜೆಟ್ ಮೂಲಕ ಯುವ ಸಮುದಾಯವನ್ನು ಕ್ರಿಯಾಶೀಲವಾಗಿ ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುವುದು ಸರ್ಕಾರದ ಉದ್ದೇಶವಾಗಿದೆ. ಯುವ ಬಜೆಟ್​ನಲ್ಲಿ ಮಧ್ಯಮ ಕೈಗಾರಿಕೆ ಮತ್ತು ಸಣ್ಣ ಕೈಗಾರಿಕೆ ಇಲಾಖೆಯ ಮೂಲಕವೇ ಹೆಚ್ಚಿನ ಅದ್ಯತೆ ನೀಡಲಾಗುತ್ತದೆ ಎಂದು ಮೂಲಗಳು ಹೇಳುತ್ತವೆ.

ಸ್ಥಳೀಯ ಸಂಪನ್ಮೂಲ ಬಳಕೆ: ಸ್ಥಳೀಯವಾಗಿ ಲಭ್ಯವಾಗುವ ವಸ್ತುಗಳನ್ನು ಬಳಸಿಕೊಂಡೇ ಕಿರು ಉದ್ಯಮಗಳನ್ನು ಸ್ಥಾಪಿಸುವ ಕಡೆ ಆದ್ಯತೆ ನೀಡಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ ಏನೇನು ಚಟುವಟಿಕೆ ಮಾಡಬಹುದೆಂಬ ಯೋಜನೆ ಇದ್ದರೂ ಸಹ ಮೊದಲ ಆದ್ಯತೆಯಾಗಿ ಕಿರು ಉದ್ಯಮಗಳಿಗೆ ಆದ್ಯತೆ ನೀಡಲಾಗುತ್ತಿದೆ. ಟೊಮ್ಯಾಟೊ ಕೆಚಪ್ ಮಾಡುವುದು, ಆಟಿಕೆಗಳ ತಯಾರಿಕೆ, ಬಿದಿರು ಬುಟ್ಟಿ ತಯಾರಿ, ಮಡಕೆ ತಯಾರಿ, ಮೊಬೈಲ್ ರಿಪೇರಿ, ಟಿವಿ ರಿಪೇರಿ ಹೀಗೆ ಸಣ್ಣ ಉದ್ಯಮಗಳನ್ನು ಸ್ಥಾಪನೆಯ ಮೂಲಕ ನಿರುದ್ಯೋಗ ನಿವಾರಣೆಗೆ ಬಜೆಟ್​ನಲ್ಲಿ ಆದ್ಯತೆ ನೀಡಲಾಗುತ್ತದೆ.

ಯುವ ಬಜೆಟ್​ನಲ್ಲಿ ರೂಪಿಸುವ ಯೋಜನೆಗಳನ್ನು ಐದು ವರ್ಷಗಳ ಕಾಲ ಜಾರಿಗೆ ಕೊಡಲಾಗುತ್ತದೆ. ಆನಂತರ ಅವುಗಳಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ.

ಸಾಲ ಹಾಗೂ ಮಾರುಕಟ್ಟೆ ಸೌಲಭ್ಯ: ಸರ್ಕಾರದಿಂದ ದುಡಿಯುವ ಬಂಡವಾಳ ಕೊಡಿಸುವುದು ಮಾತ್ರವಲ್ಲದೇ ತರಬೇತಿಯ ಜತೆಗೆ ಯುವ ಸಮುದಾಯ ತಯಾರಿಸುವ ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆ ಒದಗಿಸುವ ಬಗ್ಗೆಯೂ ಬಜೆಟ್​ನಲ್ಲಿ ಯೋಜನೆ ರೂಪುಗೊಳ್ಳಲಿದೆ.

ಪ್ರತಿ ಗ್ರಾಪಂಗೆ ಒಬ್ಬ ಅಧಿಕಾರಿ

ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಯುವ ಸಬಲೀಕರಣ ಅಧಿಕಾರಿ ನೇಮಕ ಮಾಡಲಾಗುತ್ತದೆ. ಗ್ರೂಪ್ ಸಿ ವೃಂದದ ಅಧಿಕಾರಿಯಾಗಿದ್ದು ಒಟ್ಟು 6,000 ಜನರು ನೇಮಕವಾಗಲಿದ್ದಾರೆ. ಯುವ ಬಜೆಟ್ ಹಾಗೂ ಯುವ ನೀತಿಯ ಜಾರಿ ಇವರ ಜವಾಬ್ದಾರಿಯಾಗಿರುತ್ತದೆ.

ಯುವ ಬಜೆಟ್​ನ ಆದ್ಯತೆಗಳು

  • ಉದ್ಯೋಗದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಲು ಆದ್ಯತೆ ನೀಡುವುದು
  • ರಕ್ತಹೀನತೆಯಿಂದ ಬಳಲದಂತೆ ಎಚ್ಚರಿಕೆ
  • ಕಲೆ, ಸಂಸ್ಕೃತಿ ಉಳಿಸಲು ಯುವ ಜನರ ಬಳಕೆ
  • ಪ್ರತಿ ತಾಲೂಕಿಗೆ ಕ್ರೀಡಾ ರಾಯಭಾರಿ ನೇಮಕ
  • ಯುವ ಸಂಶೋಧನಾ ವಿಭಾಗ ರಚನೆ
  • 28 ಸಾವಿರ ಗ್ರಾಮಗಳಲ್ಲಿ ತಲಾ 2 ಯುವ ಶಕ್ತಿ ಸಂಘ
  • ಪ್ರತಿ ಗ್ರಾಪಂಗೆ ಒಂದು ಸುಸಜ್ಜಿತ ಕ್ರೀಡಾಂಗಣ

ಯುವ ನೀತಿಯ ನಂತರ ಯುವ ಬಜೆಟ್ ರೂಪಿಸಲು ಮುಖ್ಯಮಂತ್ರಿ ಆಸಕ್ತರಾಗಿದ್ದಾರೆ. ಯುವಕರಲ್ಲಿ ಭರವಸೆ ಮೂಡಿಸುವುದಕ್ಕೆ ಸಂಬಂಧಿಸಿ ದಂತೆ ಸಿಎಂ ಜತೆ ಸಾಕಷ್ಟು ಚರ್ಚೆ ನಡೆಸಲಾಗಿದೆ.

| ಡಾ. ನಾರಾಯಣಗೌಡ ಯುವ ಸಬಲೀಕರಣ ಸಚಿವ

ಜನಪ್ರತಿನಿಧಿಗಳಿಗೂ ಸೂಚನೆ

ಯುವ ಶಕ್ತಿ ಸಂಘಗಳ ಸ್ಥಾಪನೆಯನ್ನು ಮೊದಲು ಗ್ರಾಮ ಪಂಚಾಯಿತಿಗೆ ಜವಾಬ್ದಾರಿ ನೀಡಲಾಗಿತ್ತು. ಈಗ ಅಂದಾಜು 8 ಸಾವಿರ ಸಂಘಗಳಿವೆ. ಈ ವರ್ಷ 12 ಸಾವಿರ ಸಂಘಗಳನ್ನು ರಚಿಸುವ ಉದ್ದೇಶವಿದೆ. ಮುಖ್ಯಮಂತ್ರಿ ಬೊಮ್ಮಾಯಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹೆಚ್ಚುವರಿಯಾಗಿ 4 ಸಾವಿರ ಸಂಘಗಳನ್ನು ಇದೇ ವರ್ಷ ಸ್ಥಾಪನೆಗೆ ಸೂಚಿಸಿದ್ದಾರೆ. ಆದ್ದರಿಂದ ಸಂಘಗಳ ಸ್ಥಾಪನೆಯ ಜವಾಬ್ದಾರಿಯನ್ನು ಸಚಿವರು ಹಾಗೂ ಶಾಸಕರಿಗೆ ನೀಡಲಾಗಿದೆ. ಯುವ ಸಬಲೀಕರಣ ಸಚಿವ ಕೆ.ಸಿ. ನಾರಾಯಣಗೌಡ ಎಲ್ಲ ಶಾಸಕರು ಹಾಗೂ ಸಚಿವರಿಗೆ ಪತ್ರ ಬರೆದು ಸಂಘಗಳನ್ನು ಸ್ಥಾಪನೆಗೆ ಆದ್ಯತೆ ನೀಡುವಂತೆ ಕೋರಿದ್ದಾರೆ. ಮುಂದಿನ ವರ್ಷ ಎಲ್ಲ 28 ಸಾವಿರ ಗ್ರಾಮಗಳಲ್ಲಿ ಸಂಘಗಳಿರುತ್ತವೆ. ಪ್ರತಿ ಸಂಘಕ್ಕೆ ಸರ್ಕಾರದಿಂದ ಒಂದು ಲಕ್ಷ ರೂ. ಹಾಗೂ ಬ್ಯಾಂಕ್​ನಿಂದ 5 ಲಕ್ಷ ರೂ. ಸಾಲ ಕೊಡಿಸಲಾಗುತ್ತದೆ. ಫೆ.12ರಂದು ಯುವಕ ಸಂಘಗಳ ಉದ್ಘಾಟನೆ ನೆರವೇರಿಸಲು ನಿರ್ಧರಿಸಲಾಗಿದೆ.

ಜ.16 ರಿಂದ ಇಲಾಖಾ ಚರ್ಚೆ

ಯುವ ಬಜೆಟ್ ಹೇಗಿರಬೇಕು? ಯಾವ ವಲಯಗಳಿಗೆ ಆದ್ಯತೆ ನೀಡಬೇಕು? ಯುವ ಸಮುದಾಯವನ್ನು ಚೈತನ್ಯಗೊಳಿಸá-ವುದಕ್ಕೆ ಏನೇನು ಕಾರ್ಯಕ್ರಮಗಳನ್ನು ಬಜೆಟ್​ನಲ್ಲಿ ನೀಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಯುವ ಸಬಲೀಕರಣ ಇಲಾಖೆ ಸಂಬಂಧಿಸಿದ ಎಲ್ಲ ಇಲಾಖೆಗಳ ಸಭೆಯನ್ನು ಜ.16 ರಿಂದ ನಡೆಸಲಿದೆ. ಪ್ರತಿ ಇಲಾಖೆಯಲ್ಲಿ ಕಾಯ್ದಿರಿಸಿದ ಹಣವನ್ನು ಯುವ ಸಮುದಾಯ ಆಧಾರಿತ ಕಾರ್ಯಕ್ರಮಗಳಿಗೆ ವೆಚ್ಚ ಮಾಡುವಂತೆ ಕ್ರಿಯಾ ಯೋಜನೆ ರೂಪಿಸುವುದು, ಅವುಗಳನ್ನು ಬಜೆಟ್​ನಲ್ಲಿ ಸೇರಿಸುವಂತೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net