ಸೋರುತ್ತಿದೆ ಕಾರ್ನಾಡು ಸದಾಶಿವ ರಾವ್ ಸ್ಟೇಡಿಯಂ :ಕಾರ್ಯಕಲ್ಪಕ್ಕೆ ಸ್ಥಳೀಯರ ಮನವಿ : ನಿರ್ವಹಣೆ ಕೊರತೆ

New Project (9)
Published on

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ಮೂಲ್ಕಿ ನಗರದಲ್ಲಿ ಮಹಾತ್ಮಾ ಗಾಂಧಿಜೀ ಸ್ವಾತಂತ್ರ್ಯ ಹೋರಾಟ ನಡೆಸಿದ್ದ ಗಾಂಧಿ ಮೈದಾನದಲ್ಲಿನ ಸ್ವಾತಂತ್ರ್ಯ ಹೋರಾಟಗಾರ ದೇಶಭಕ್ತ ಕಾರ್ನಾಡ್ ಸದಾಶಿವ ರಾವ್ ಸ್ಟೇಡಿಯಂ ಇತ್ತೀಚಿನ ದಿನಗಳಲ್ಲಿ ನಿರ್ವಹಣೆ ಕೊರತೆಯಿಂದ ಕುಸಿಯುವ ಹಂತ ತಲುಪಿದೆ. ರಾಜ್ಯ ಸರ್ಕಾರದ ಯುವಜನ ಮತ್ತು ಕ್ರೀಡಾ ಇಲಾಖೆ ಅಧೀನಕ್ಕೆ ಒಳಪಟ್ಟ ಕಾರ್ನಾಡ್ ಸದಾಶಿವರಾವ್ ಸ್ಟೇಡಿಯಂ ಛಾವಣಿಯಲ್ಲಿರುವ 20 ವರ್ಷಗಳ ಹಿಂದಿನ ಸಿಮೆಂಟ್ ಶೀಟ್‌ಗಳಲ್ಲಿ ಬಿರುಕು ಉಂಟಾಗಿದ್ದು ಭಾರಿ ಮಳೆಗೆ ಫೆವಿಲಿಯನ್ ಸೋರುತ್ತಿದೆ.

ನಾಗರಿಕರಿಗೆ ತೊಂದರೆ: ಸ್ಟೇಡಿಯಂನಲ್ಲಿ ಕುಳಿತುಕೊಳ್ಳಲು ನಿರ್ಮಿಸಿದ ಮೆಟ್ಟಿಲುಗಳು ಒಡೆದಿದ್ದು ಕಾರ್ಯಕ್ರಮ ಸಂಘಟಕರಿಗೆ ತೀವ್ರ ತೊಂದರೆಯಾಗುತ್ತಿದೆ. ಮೂಲ್ಕಿ ತಾಲೂಕು ವ್ಯಾಪ್ತಿಯ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಸಾರ್ವಜನಿಕ ಕ್ರಿಕೆಟ್ ಪಂದ್ಯಾಟ ಸಹಿತ ಅನೇಕ ಸಭಾ ಕಾರ್ಯಕ್ರಮಗಳು ಸ್ಟೇಡಿಯಂನಲ್ಲಿ ನಡೆಯುತ್ತಿದ್ದು ಮೂಲವ್ಯವಸ್ಥೆಗಳು ಸರಿಯಾಗಿ ಇಲ್ಲದೆ ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಕಳಪೆ ಕಾಮಗಾರಿ: 2004 ಇಸವಿಯಲ್ಲಿ ಅಂದಿನ ಲೋಕಸಭಾ ಸದಸ್ಯ ವಿನಯ್ ಕುಮಾರ್ ಸೊರಕೆ ಅವರಿಂದ ಶಂಕುಸ್ಥಾಪನೆಗೊಂಡ ಸ್ಟೇಡಿಯಂ ಕಾಮಗಾರಿ ಬಳಿಕ ಉದ್ಘಾಟನೆಗೊಂಡಿತ್ತು. ಅಂದಿನ ರಾಜ್ಯಸಭಾ ಸದಸ್ಯರಾದ ಜನಾರ್ದನ ಪೂಜಾರಿ ಹಾಗೂ ಆಸ್ಕರ್ ಫರ್ನಾಂಡಿಸ್ ಅವರು ತಲಾ 10 ಲಕ್ಷ ರೂ. ಅನುದಾನ ಒದಗಿಸಿದ್ದರು. ಕಾಮಗಾರಿ ಕಳಪೆಯಾದ ಬಗ್ಗೆ ಅನೇಕ ಬಾರಿ ನಾಗರಿಕರು ಸ್ಥಳೀಯ ಆಡಳಿತಕ್ಕೆ ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಗಾಂಜಾ ಹಾವಳಿ: ಸಂಜೆಯಾಗುತ್ತಿದ್ದಂತೆ ಗಾಂಜಾ ಮತ್ತಿತರ ಅಮಲು ವ್ಯಸನಿಗಳು ಇಲ್ಲಿ ಸೇರುವ ಕಾರಣ ಸಾರ್ವಜನಿಕರು ಅಲ್ಲಿ ಹೋಗುವಂತಿಲ್ಲ. ಸ್ಟೇಡಿಯಂ ಫೆವಿಲಿಯನ್‌ನಲ್ಲಿ ವಿದ್ಯುತ್ ಬೆಳಕಿನ ಕೊರತೆಯಿಂದ ಅನೈತಿಕ ಚಟುವಟಿಕೆಗಳು ಕೂಡ ನಡೆಯುತ್ತಿರುವ ಬಗ್ಗೆ ದೂರಲಾಗಿತ್ತು. ಗಾಂಜಾ ವ್ಯಸನಿಗಳ ನಿಯಂತ್ರಣದ ಬಗ್ಗೆ ಪಂಚಾಯಿತಿ ಮುಖ್ಯಾಧಿಕಾರಿಗಳು ಮಾಸಿಕ ಸಭೆಯಲ್ಲಿ ಪೊಲೀಸರಿಗೆ ತಿಳಿಸಿದ್ದರು. ಕೂಡಲೇ ಯುವಜನ ಮತ್ತು ಕ್ರೀಡಾ ಇಲಾಖೆ ಎಚ್ಚೆತ್ತು ಕಾರ್ನಾಡ್ ಸದಾಶಿವ ರಾವ್ ಸ್ಟೇಡಿಯಂಗೆ ಕಾರ್ಯಕಲ್ಪ ಒದಗಿಸಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net