ರಾಕಿಂಗ್ ಸ್ಟಾರ್ ಯಶ್‌ ಹೊಸ ಸಿನಿಮಾ 'ಟಾಕ್ಸಿಕ್‌'ನಲ್ಲಿ ಬಾಲಿವುಡ್ ಬೆಡಗಿ ಕರೀನಾ ಕಪೂರ್?

yash
Published on

ಮುಂಬೈ: 'ಕೆಜಿಎಫ್' ನಂತರ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಆಯ್ಕೆಯಲ್ಲಿ ಬಹಳ ಹುಷಾರಾಗಿದ್ದಾರೆ. ಹೆಚ್ಚಿನ ಅವಸರ ಮಾಡದೆ ಒಳ್ಳೆಯ ಸಿನಿಮಾಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕೆಜಿಎಫ್ ಆದ ಮೇಲೆ ಒಂದೂವರೆ ವರ್ಷಗಳ ನಂತರ, ಅವರು ತಮ್ಮ ಮುಂದಿನ ಚಿತ್ರ 'ಟಾಕ್ಸಿಕ್' ಎಂದು ಘೋಷಿಸಿದರು. ಗೀತು ಮೋಹನ್ ದಾಸ್ ಈ ಚಿತ್ರವನ್ನು ನಿರ್ದೇಶಿಸಲಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

ಅಂದಹಾಗೆ ಹಿಂದಿ ಚಲನಚಿತ್ರ ವಲಯಗಳಿಂದ ಕೇಳಿಬರುತ್ತಿರುವ ವದಂತಿಗಳ ಪ್ರಕಾರ, ಈ ಸಿನಿಮಾದಲ್ಲಿ ನಟಿಸುವಂತೆ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಖಾನ್ ಅವರನ್ನು ಚಿತ್ರತಂಡ ಸಂಪರ್ಕಿಸಿದ್ದು, ನಟಿ ಸಕಾರಾತ್ಮಕ ಒಪ್ಪಿಗೆಯೊಂದಿಗೆ ಪ್ರತಿಕ್ರಿಯಿಸಿದ್ದಾರಂತೆ.

ಕರೀನಾ ಯಶ್​​​​ಗೆ ಜೋಡಿಯಾಗಿದ್ದಾರೆಯೇ ಅಥವಾ ಟಾಕ್ಸಿಕ್‌ನಲ್ಲಿ ಪ್ರಮುಖ ಪಾತ್ರಕ್ಕಾಗಿ ಅವರನ್ನು ಸಂಪರ್ಕಿಸಲಾಗಿದೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಶೀಘ್ರದಲ್ಲೇ ಈ ಬಗ್ಗೆ ನಿರ್ಮಾಪಕರು ಘೋಷಣೆ ಮಾಡಲಿದ್ದಾರೆ. ಸದ್ಯ ಪ್ರಕಟಣೆಯ ಜೊತೆಗೆ, ಚಿತ್ರದ ಥೀಮ್ ಅನ್ನು ಬಹಿರಂಗಪಡಿಸುವ ಕಿರು ವಿಡಿಯೋಬೈಟ್ ಅನ್ನು ಅನಾವರಣಗೊಳಿಸಲಾಗಿದೆ.

'ಟಾಕ್ಸಿಕ್' ಗೋವಾ ಹಿನ್ನಲೆಯುಳ್ಳ ಚಿತ್ರವಾಗಿದ್ದು, ಕಥೆಯು ಡ್ರಗ್ಸ್ ಸುತ್ತ ಸುತ್ತುತ್ತದೆ ಎಂಬ ವರದಿಗಳಿವೆ. KVN ಪ್ರೊಡಕ್ಷನ್ಸ್ ನಿರ್ಮಾಪಕರು ಚಿತ್ರವು ಏಪ್ರಿಲ್ 10, 2025 ರಂದು ಬಿಡುಗಡೆಯಾಗುತ್ತದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಕರೀನಾ ಕಪೂರ್ ಖಾನ್ 'ದಿ ಬಕಿಂಗ್ಹ್ಯಾಮ್ ಮರ್ಡರ್ಸ್' ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಅವರು ಶೀಘ್ರದಲ್ಲೇ ಅಜಯ್ ದೇವಗನ್ ಅವರೊಂದಿಗೆ ಸಿಂಗಮ್ ಎಗೇನ್ ಸೆಟ್‌ಗೆ ಸೇರಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net