

ಸುಶಾಂತ್ ಸಿಂಗ್ ಆತ್ಮಹತ್ಯೆ ಕೇಸ್ನಲ್ಲಿ ಬಾಲಿವುಡ್ನ ಪ್ರಭಾವಿ ವ್ಯಕ್ತಿಗಳ ಹೆಸರು ತಳುಕು ಹಾಕಿಕೊಂಡಿದ್ದು, ಈ ಪೈಕಿ ಸಲ್ಮಾನ್ ಖಾನ್, ಕರಣ್ ಜೋಹರ್, ಸಂಜಯ್ ಲೀಲಾ ಬನ್ಸಾಲಿ ಮುಂತಾದ ಹಲವು ಖ್ಯಾತನಾಮರ ಹೆಸರು ಸೇರಿಕೊಂಡಿರುವುದು ಈ ಒಂದು ತಿಂಗಳಲ್ಲಿ ಸಾಕಷ್ಟು ಸುದ್ದಿಯಾಗಿದೆ.
ಅದರಲ್ಲೂ ಸುಶಾಂತ್ ಸಿಂಗ್ ಸಾವಿನಲ್ಲಿ ಕರಣ್ ಜೋಹರ್ ಅವರ ಪಾತ್ರದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಕರಣ್ರಂತಹ ಪ್ರಭಾವಿಗಳು ಸುಶಾಂತ್ರನ್ನು ದೂರ ಇಟ್ಟ ಕಾರಣ, ಆತ ನೊಂದು ಆತ್ಮಹತ್ಯೆ ದಾರಿ ಹಿಡಿದಿರಬಹುದು ಎಂದು ಹೇಳಲಾಗುತ್ತಿದೆ. ಇದೇ ವಿಷಯವಾಗಿ, ಕರಣ್ ಸಾಕಷ್ಟು ಟ್ರೋಲ್ಗೆ ಒಳಗಾಗಿದ್ದಾರೆ.
ಈಗ ತಮ್ಮ ವಿರುದ್ಧ ಸತತವಾಗಿ ಬಿದ್ದಿರುವ ಟ್ರೋಲಿಗರಿಗೆ ಪಾಠ ಕಲಿಸುವುದಕ್ಕೆ ಕರಣ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ತಮಗೆ ಮಾನಸಿಕ ಹಿಂಸೆ ಕೊಡುತ್ತಿರುವವರ ವಿರುದ್ಧ ಮಾಹಿತಿ ಸಂಗ್ರಹಿಸಿ, ಆ ನಂತರ ದೂರು ಕೊಡುವುದಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಸುಶಾಂತ್ ಸಾವಿನ ನಂತರ ಕರಣ್ ವಿರುದ್ಧ ನೆಟ್ಟಿಗರಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಕೆಲವರು ಕರಣ್ ಬಗ್ಗೆ ಸತತವಾಗಿ ಟ್ರೋಲ್ ಮಾಡುವುದರ ಜತೆಗೆ, ಅವರಿಗೆ ಜೀವ ಬೆದರಿಕೆಯನ್ನೂ ಹಾಕಿದ್ದರು ಎಂದು ಹೇಳಲಾಗುತ್ತಿದೆ. ಇದರಿಂದ ಕರಣ್, ಖಿನ್ನತೆಗೆ ಒಳಗಾಗಿದ್ದು, ಅದರಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರಂತೆ.
ಹಾಗಾಗಿ ಈ ವಿರುದ್ಧ ಸೈಬರ್ ಕ್ರೈಮ್ಗೆ ಸದ್ಯದಲ್ಲೇ ದೂರು ಕೊಡುವುದಕ್ಕೆ ಕರಣ್ ಯೋಚಿಸಿದ್ದು, ಅದಕ್ಕೂ ಮೊದಲು, ತಮ್ಮ ವಿರುದ್ಧ ಹರಿಹಾಯ್ದ ಮತ್ತು ಜೀವ ಬೆದರಿಕೆ ಹಾಕಿದ ಮಂದಿಯ ವಿರುದ್ಧ ಮಾಹಿತಿ ಸಂಗ್ರಹಿಸುತ್ತಿದ್ದಾರಂತೆ. ತಮ್ಮನ್ನು ಟ್ರೋಲ್ ಮಾಡಿದ್ದು ಯಾರು, ಅವರ ಹಿನ್ನೆಲೆ ಏನು, ಅವರಿಂದ ಯಾರಾದರೂ ಈ ತರಹದ ಕೆಲಸ ಮಾಡಿಸುತ್ತಿದ್ದಾರಾ ... ಮುಂತಾದ ಹಲವು ಮಾಹಿತಿಗಳನ್ನು ಸಂಗ್ರಹಿಸುವಲ್ಲಿ ಕರಣ್ ನಿರತರಾಗಿದ್ದು, ಅದಕ್ಕೊಂದು ತಂಡ ರಚಿಸಿದ್ದಾರಂತೆ. ಆ ತಂಡ ಕೊಟ್ಟ ವರದಿಯನ್ನಿಟ್ಟುಕೊಂಡು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡುವುದು ಅವರ ಯೋಚನೆ.
ಇದನ್ನೂ ಓದಿ: ಕೆಲಸ ಇಲ್ಲದೆ ರಾಖಿ ಮಾಡಿ ಮಾರುತ್ತಿರುವ ಸೀರಿಯಲ್ ನಟಿ
ಇದಕ್ಕೂ ಮುನ್ನ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಗೂ ಕೊಲೆ ಮತ್ತು ರೇಪ್ ಬೆದರಿಕೆಗಳು ಬಂದಿದ್ದು, ಈ ವಿರುದ್ಧ ಅವರು ಸೈಬರ್ ಕ್ರೈಮ್ ಮೊರೆ ಹೋಗಿದ್ದರು. ಅದಕ್ಕೆ ಸರಿಯಾಗಿ, ರಿಯಾಗೆ ತೊಂದರೆ ಕೊಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.