ಕಾಪು ಪುರಸಭೆಗೆ ಹರಿಣಾಕ್ಷಿ ಅಧ್ಯಕ್ಷೆ

kapu
ಕಾಪು ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ, ಉಪಾಧ್ಯಕ್ಷೆ ಸರಿತಾ
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಕಾಪು ಪುರಸಭೆಯ ಅಧ್ಯಕ್ಷೆಯಾಗಿ ಎನ್‌ಡಿಎ ಮೈತ್ರಿಕೂಟದ ಹರಿಣಾಕ್ಷಿ ಹಾಗೂ ಉಪಾಧ್ಯಕ್ಷೆಯಾಗಿ ಸರಿತಾ ಚುನಾಯಿತರಾಗಿದ್ದಾರೆ.
ಪುರಸಭೆ 23 ಸ್ಥಾನ ಹೊಂದಿದ್ದು, ಈ ಪೈಕಿ 12 ಸ್ಥಾನಗಳನ್ನು ಗೆದ್ದು ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಕಾಂಗ್ರೆಸ್‌ಗೆ 7 ಸ್ಥಾನ ಪಡೆದಿದೆ. ಮೊದಲ ಬಾರಿಗೆ ಜಾತ್ಯತೀತ ಜನತಾದಳ 1 ಹಾಗೂ ಎಸ್‌ಡಿಪಿಐನಿಂದ 3 ಅಭ್ಯರ್ಥಿಗಳು ವಿಜೇತರಾಗಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಜೆಡಿಎಸ್ ಬಿಜೆಪಿ ಒಳಗೊಂಡ ಎನ್‌ಡಿಎ ಒಕ್ಕೂಟ ಅಭ್ಯರ್ಥಿಯಾಗಿ ಹರಿಣಾಕ್ಷಿ ಹಾಗೂ ಕಾಂಗ್ರೆಸ್‌ನಿಂದ ಶೋಭಾ ಎ ಬಂಗೇರ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಸರಿತಾ, ಕಾಂಗ್ರೆಸ್‌ನಿಂದ ಸತೀಶ್ಚಂದ್ರ ಸ್ಪರ್ಧಿಸಿದ್ದರು. ಕಾಪು ತಹಸೀಲ್ದಾರ್ ಪ್ರತಿಭಾ ಆರ್ ಸಮ್ಮುಖದಲ್ಲಿ ನಡೆದ ಚುನಾವಣೆಯಲ್ಲಿ ಶಾಸಕ ಹಾಗೂ ಸಂಸದರ ಬೆಂಬಲದೊಂದಿಗೆ ಎನ್‌ಡಿಎ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿಗಳು ತಲಾ 16 ಮತಗಳನ್ನು ಪಡೆದರೆ, ಎದುರಾಳಿ ಅಭ್ಯರ್ಥಿಗಳು ಎಸ್‌ಡಿಪಿಐ ಇಬ್ಬರು ಸದಸ್ಯರ ಬೆಂಬಲದೊಂದಿಗೆ ತಲಾ 9 ಮತಗಳನ್ನು ಗಳಿಸಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಚುನಾವಣಾ ವೀಕ್ಷಕ ಮನೋಹರ ಕಲ್ಮಾಡಿ, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಬಾಲಾಜಿ ಅಧ್ಯಕ್ಷ ಉಪಾಧ್ಯಕ್ಷರಿಗೆ ಶುಭ ಹಾರೈಸಿದರು.

ಅಧ್ಯಕ್ಷ ಹುದ್ದೆ ಹಂಚಿಕೆ ಸೂತ್ರ: ಪುರಸಭೆಯ ಅಧ್ಯಕ್ಷ ಹುದ್ದೆಗೆ ಬಹುಮತ ಹೊಂದಿದ್ದ ಬಿಜೆಪಿಯಲ್ಲಿ ಮೋಹಿನಿ ಶೆಟ್ಟಿ, ಹರಿಣಾಕ್ಷಿ ದೇವಾಡಿಗ, ಸರಿತಾ ಪೂಜಾರಿ ಮತ್ತು ಲತಾ ದೇವಾಡಿಗ ಆಕಾಂಕ್ಷಿಗಳಾಗಿದ್ದು, ಕೊನೆಯ ಹಂತದಲ್ಲಿ ಮೋಹಿನಿ ಶೆಟ್ಟಿ ಮತ್ತು ಹರಿಣಾಕ್ಷಿ ದೇವಾಡಿಗ ಆಯ್ಕೆಯಾಗಿದ್ದರು. ಇಬ್ಬರು ಆಕಾಕ್ಷಿಂಗಳ ನಡುವೆ ತಲಾ 15 ತಿಂಗಳ ಒಡಂಬಡಿಕೆ ನಡೆದು ಬಳಿಕ ಚೀಟಿ ಎತ್ತುವ ಮೂಲಕ ಹರಿಣಾಕ್ಷಿ ದೇವಾಡಿಗ ಅವರನ್ನು ಅಧ್ಯಕ್ಷರಾಗಿ ಘೋಷಿಸಲಾಯಿತು. ಉಪಾಧ್ಯಕ್ಷ ಹುದ್ದೆಗೆ ಬಿಜೆಪಿಯಲ್ಲಿ ಸೂಕ್ತ ಅಭ್ಯರ್ಥಿಗಳ ಕೊರತೆ ಇತ್ತು. ಕೊನೇ ಕ್ಷಣದಲ್ಲಿ ಎಸ್‌ಡಿಪಿಐನಿಂದ ಬಿಜೆಪಿ ಸೇರ್ಪಡೆಯಾದ ಸರಿತಾ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದರು.

ಕಾಪು ಪುರಸಭೆ ವ್ಯಾಪ್ತಿಯ ಒಳಚರಂಡಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಮತ್ತು ರಸ್ತೆಗಳ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುತ್ತೇನೆ. ಸಮಸ್ಯೆಗಳ ಕುರಿತು ಪುರಸಭೆ ಅಧಿಕಾರಿಗಳು ಮತ್ತು ಸದಸ್ಯರ ಜತೆಗೆ ಚರ್ಚಿಸಿ ತುರ್ತಾಗಿ ಬಗೆಹರಿಸಲಾಗುವುದು. ಸರ್ಕಾರದ ಅನುದಾನ, ಶಾಸಕರ ಅನುದಾನ ಬಳಸಿಕೊಂಡು ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತದೆ.-ಹರಿಣಾಕ್ಷಿ ಕಾಪು ಪುರಸಭೆ ಅಧ್ಯಕ್ಷೆ

ಪುರಸಭೆ ವ್ಯಾಪ್ತಿಯ ಸಮಸ್ಯೆಗಳನ್ನು ಅಧ್ಯಯನ ಮಾಡಿ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ಹಿರಿಯ ಮತ್ತು ಕಿರಿಯ ಸದಸ್ಯರ ಸಲಹೆ ಪಡೆದು ಯೋಜನೆಗಳ ಅನುಷ್ಟಾನಕ್ಕೆ ಕಾರ್ಯಪ್ರವೃತ್ತನಾಗುತ್ತೇನೆ.-ಸರಿತಾ, ಉಪಾಧ್ಯಕ್ಷೆ ಕಾಪು ಪುರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net