ಪಡುಬಿದ್ರಿ: ಕಾಪು ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಬುಧವಾರ ನಡೆದಿದ್ದು, ಬಹುಮತದೊಂದಿಗೆ ಹುದ್ದೆಗಳೆರಡನ್ನೂ ಬಿಜೆಪಿ ತನ್ನಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚುನಾವಣೆ ಅಂತಿಮ ಹಂತದ ಕ್ಲೈಮಾಕ್ಸ್ ಇದೀಗ ಕಾಂಗ್ರೆಸ್, ಬಿಜೆಪಿ ಮತ್ತು ಎಸ್‌ಡಿಪಿಐ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ.
ಪುರಸಭೆಯಲ್ಲಿ ಬಹುಮತವಿದ್ದರೂ ಉಪಾಧ್ಯಕ್ಷ ಹುದ್ದೆ ಮೀಸಲಾತಿಯಂತೆ ಬಿಜೆಪಿಯಲ್ಲಿ ಸೂಕ್ತ ಅಭ್ಯರ್ಥಿ ಕೊರತೆಯಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಎಸ್‌ಡಿಪಿಐ ಬೆಂಬಲಿತ ಸದಸ್ಯೆ ಬಿಜೆಪಿಗೆ ಸೇರ್ಪಡೆಗೊಂಡು, ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆದ್ದು ಉಪಾಧ್ಯಕ್ಷ ಹುದ್ದೆ ಅಲಂಕರಿಸಿದ್ದು, ಬಿಜೆಪಿಯಲ್ಲಿ ಅಭ್ಯರ್ಥಿಯಿಲ್ಲದೇ ಇರುವುದರಿಂದ ಉಪಾಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್ ಪಕ್ಷಕ್ಕೆ ಇದು ನಿರಾಸೆಯನ್ನುಂಟು ಮಾಡಿದೆ.
ಎಸ್‌ಡಿಪಿಐ-ಬಿಜೆಪಿ ಅಪವಿತ್ರ ಮೈತ್ರಿ
ಪರಿಶಿಷ್ಟ ಜಾತಿಯ ಅಭ್ಯರ್ಥಿಯನ್ನು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಬಿಜೆಪಿಗೆ ಕಳುಹಿಸಿಕೊಟ್ಟು, ತಾವು ಕಾಂಗ್ರೆಸ್‌ನ್ನು ಬೆಂಬಲಿಸುತ್ತೇವೆ ಎಂಬ ಹೇಳಿಕೆ ನೀಡುವ ಮೂಲಕ ಎಸ್‌ಡಿಪಿಐ ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ನಡೆಸಿದೆ. ಅಧಿಕಾರ ಹೊಂದಾಣಿಕೆಯಾಗಲೀ, ಬೆಂಬಲ ಕೋರಿಯಾಗಲೀ ಕಾಂಗ್ರೆಸ್ ಪಕ್ಷ ಎಸ್‌ಡಿಪಿಐ ಜತೆಗೆ ಯಾವುದೇ ಮಾತುಕತೆ ನಡೆಸಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲುವ ಅವಕಾಶವಿದ್ದರೂ, ನಮ್ಮನ್ನು ಅಧಿಕಾರದಿಂದ ದೂರವಿಡುವುದಕ್ಕಾಗಿ ಎಸ್‌ಡಿಪಿಐ ಸದಸ್ಯೆಯನ್ನು ಬಿಜೆಪಿ ಜತೆಗೆ ಕಳುಹಿಸಿರುವ ಅವರದ್ದು, ಕಾಂಗ್ರೆಸ್ ಜತೆಗಿನ ಹೊಂದಾಣಿಕೆಯೋ ಅಥವಾ ಬಿಜೆಪಿ ಜತೆಗೆ ಹೊಂದಾಣಿಕೆಯೋ ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಉಪಾಧ್ಯಕ್ಷ ಸ್ಥಾನದ ಪರಾಜಿತ ಅಭ್ಯರ್ಥಿ ಸತೀಶ್ಚಂದ್ರ ಮೂಳೂರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಆರೋಪಕ್ಕೆ ತಿರುಗೇಟು
ಬಿಜೆಪಿ ಪರಿಶಿಷ್ಟ ಜಾತಿ ಮಹಿಳೆಯನ್ನು ಪುರಸಭೆ ಉಪಾಧ್ಯಕ್ಷೆಯನ್ನಾಗಿ ಮಾಡಿರುವುದನ್ನು ಕಾಂಗ್ರೆಸ್ ಪಕ್ಷಕ್ಕೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎಸ್‌ಡಿಪಿಐ ಪಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ತನ್ನ ಸದಸ್ಯೆ ಸರಿತಾ ಅವರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ವಿಪ್ ನೋಟಿಸ್ ನೀಡಿದ್ದು, ಇದನ್ನು ನಿರಾಕರಿಸಿ ಅವರು ಎಸ್‌ಡಿಪಿಐಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ನಂತರವೇ ಅವರಿಗೆ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ನೀಡಿ ಅವರನ್ನು ನಾವು ಗೆಲ್ಲಿಸಿದ್ದೇವೆ. ಅದೂ ಅಲ್ಲದೇ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಯಲ್ಲಿ ಬಂಟ್ವಾಳ ಪುರಸಭೆ ಚುನಾವಣೆಯಂತೆ ಕಾಪುವಿನಲ್ಲಿಯೂ ಕಾಂಗ್ರೆಸ್ ಮತ್ತು ಎಸ್‌ಡಿಪಿಐ ನಡುವೆ ಮೈತ್ರಿಯಾಗಿದ್ದು ಹಾಗಾಗಿ ಏಳು ಮಂದಿ ಸದಸ್ಯ ಬಲದ ಕಾಂಗ್ರೆಸ್ ಚುನಾವಣೆಯಲ್ಲಿ 9 ಮತ ಪಡೆಯುವಂತಾಗಿದೆ ಎಂದು ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಪಕ್ಷದಿಂದ ಉಚ್ಛಾಟನೆ ಕಾನೂನು ಕ್ರಮ
ಕಾಪು ಪುರಸಭೆ ಉಪಾಧ್ಯಕ್ಷ ಹುದ್ದೆಗಾಗಿ ಬಿಜೆಪಿಯಲ್ಲಿ ಅಭ್ಯರ್ಥಿಗಳಿಲ್ಲದ ಕಾರಣ, ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸುವುದಕ್ಕಾಗಿ ನಾವು ಆರಂಭದಲ್ಲೇ ಕಾಂಗ್ರೆಸ್ ಜತೆಗೆ ಮಾತುಕತೆಗೆ ಪ್ರಯತ್ನಿಸಿದ್ದೆವು. ಆದರೆ ಕಾಂಗ್ರೆಸ್ ನಾಯಕರು ನಮ್ಮೊಂದಿಗೆ ಮಾತುಕತೆಗೆ ಸಿಕ್ಕಿರಲಿಲ್ಲ. ಕೊನೇ ಕ್ಷಣದಲ್ಲಿ ಸರಿತಾ ಅವರು ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಸೇರ್ಪಡೆಗೊಂಡು, ಉಪಾಧ್ಯಕ್ಷ ಹುದ್ದೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾವಣೆಯಲ್ಲಿ ಗೆಲ್ಲುವಂತಾಗಿದೆ. ಕಾಂಗ್ರೆಸ್ ಪಕ್ಷ ತನ್ನ ಹಠಮಾರಿತನ ಬಿಡದ ಪರಿಣಾಮ ಹೀಗಾಗಿದೆ. ಹಾಗಿದ್ದರೂ ನಾವು ನಮ್ಮ ಸದಸ್ಯರಿಗೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡುವಂತೆ ವಿಪ್ ನೋಟಿಸ್ ನೀಡಿದ್ದೆವು. ನಮ್ಮ ಇಬ್ಬರು ಸದಸ್ಯರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿದ್ದಾರೆ. ವಿಪ್ ಉಲ್ಲಂಘಿಸಿ, ಉಮೇದುವಾರಿಕೆ ಸಲ್ಲಿಸಿದ್ದ ಸರಿತಾ ಅವರ ಉಮೇದ್ವಾರಿಕೆ ತಿರಸ್ಕರಿಸುವಂತೆ ಚುನಾವಣಾಧಿಕಾರಿಗೂ ಮನವಿ ಸಲ್ಲಿಸಿದ್ದೆವು. ವಿಪ್ ವಿರುದ್ಧವಾಗಿ ನಡೆದುಕೊಂಡಿರುವ ಸರಿತಾ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಜಿಲ್ಲಾ ಸಮಿತಿ ರಾಜ್ಯ ಸಮಿತಿಗೆ ಶಿಫಾರಸ್ಸು ಮಾಡಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಪ್ ಬಾವ ತಿಳಿಸಿದ್ದಾರೆ.