

ಮುಂಬೈ: ಫೆಬ್ರವರಿ 19ರಿಂದ ಮಾರ್ಚ್ 09ರವರೆಗೆ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಭರದ ಸಿದ್ಧತೆ ನಡೆದಿದ್ದು, ಟೂರ್ನಿ ಆರಂಭವಾಗುವುದನ್ನು ಕ್ರೀಡಾಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇನ್ನೂ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನದ ಆತಿಥ್ಯ ವಹಿಸುತ್ತಿದ್ದು, ಭಾರತ ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲಿ (ಹೈಬ್ರಿಡ್ ಮಾದರಿ) ಆಡಲಿದೆ. ಟೂರ್ನಿ ಶುರುವಾಗುವುದಕ್ಕೂ ಮುನ್ನ ಭಾರತದ ಮಾಜಿ ಆಟಗಾರರು ಟೀಮ್ ಇಂಡಿಯಾಗೆ ಸಲಹೆಗಳನ್ನು ನೀಡುತ್ತಿದ್ದು, ಇದೀಗ ಕಪಿಲ್ ದೇವ್ (Kapil Dev) ಈ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭಾರತ ತಂಡದ ಪ್ರದರ್ಶನಕ್ಕೆ ಬರುವುದಾದರೆ ಹಿರಿಯ ಆಟಗಾರರಾದ ರೋಹಿತ್ (Rohit Sharma) ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಡಲಾಗಿತ್ತು. ಆದರೆ, ಹಿಟ್ಮ್ಯಾನ್ ಭಾರೀ ನಿರಾಸೆಯನ್ನು ಮೂಡಿಸಿದ್ದು, ರೋಹಿತ್ ಶರ್ಮ ನಿವೃತ್ತಿಗೆ ಆಗ್ರಹ ಕೇಳಿ ಬರುತ್ತಿದೆ. ಇದೀಗ ಈ ಬಗ್ಗೆ ಮಾಜಿ ಕ್ರಿಕೆಟಿಗ ಕಪಿಲ್ ದೇವ್ (Kapil Dev) ಮಾತನಾಡಿದ್ದು, ರೋಹಿತ್ಗೆ ಮಹತ್ವದ ಸಲಹೆಯನ್ನು ನೀಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಕಪಿಲ್ ದೇವ್, ರೋಹಿತ್ ಒಬ್ಬ ದೊಡ್ಡ ಆಟಗಾರ. ಆತ ಆದಷ್ಟು ಬೇಗ ಫಾರ್ಮ್ಗೆ ಮರಳುತ್ತಾನೆ ಎಂಬ ವಿಶ್ವಾಸ ನನಗಿದೆ. ಆತ ತನ್ನ ಫಾರ್ಮ್ ಕಂಡುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಇಡೀ ದೇಶವು ತಂಡದ ಪ್ರದರ್ಶನಕ್ಕಾಗಿ ಎದುರು ನೋಡುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ತಂಡವು ಅಸ್ಥಿತ ಪ್ರದರ್ಶವನ್ನು ತೋರುತ್ತಿದ್ದು, ನಾಯಕನ ಫಾರ್ಮ್ ಕಳಪೆಯಾಗಿದ್ಧಾಗ ಈ ರೀತಿಯಾಗುವುದು ಸಹಜ ಎಂದು ಅಭಿಪ್ರಾಯಪಟ್ಟಿದ್ಧಾರೆ.
ತಂಡದ ಪ್ರದರ್ಶನ ಕಂಡು ಅಭಿಮಾನಿಗಳು ಕೋಪಗೊಂಡಿದ್ದಾರೆ. ಟಿ20 ವಿಶ್ವಕಪ್ ಗೆದ್ದು ಭಾರತಕ್ಕೆ ಹಿಂತಿರುಗಿದ ಬಳಿಕ ಆಟಗಾರರಿಗೆ ಸಿಕ್ಕ ಸ್ವಾಗತ ನನ್ನ ಜೀವನದಲ್ಲಿ ನಾನು ನೋಡಿರಲಿಲ್ಲ. ಒಂದೊಮ್ಮೆ ನಾವು ಆಟಗಾರರನ್ನು ಹೊಗಳಲು ಶುರು ಮಾಡಿದಾಗ ಅದನ್ನು ನಿಭಾಯಿಸಲು ಆಟಗಾರರಿಂದ ಸಾಧ್ಯವಾಗುವುದಿಲ್ಲ. ಅದಕ್ಕೆ ನಾನು ಎಲ್ಲರಿಗೂ ಹೇಳುವುದೇನೆಂದರೆ, ಆಟಗಾರರನ್ನು ತುಂಬಾ ಹೊಗಳಬೇಡಿ, ಅವರಿಗೆ ನಿಭಾಯಿಸಲು ಸಾಧ್ಯವಿಲ್ಲ ಎಂದು ರೋಹಿತ್ ಶರ್ಮ ಫಾರ್ಮ್ ಕುರಿತು ಮಾಜಿ ಕ್ರಿಕೆಟಿಗ ಕಪಿಲ್ ದೇವ್ (Kapil Dev) ಹೇಳಿದ್ದಾರೆ.