

ಬೆಂಗಳೂರು: ಕನಕಪುರದ ತಾಲೂಕಿನ ಕಪಾಲಬೆಟ್ಟದಲ್ಲಿ ಯಾವುದೇ ಕಾಮಗಾರಿಗೆ ನಡೆಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಕೆಲ ವರ್ಷಗಳ ಹಿಂದೆಯೇ ಕಪಾಲ ಬೆಟ್ಟದಲ್ಲಿ ಸುಮಾರು 80 ಅಡಿ ಎತ್ತರದ ಯೇಸು ಪ್ರತಿಮೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಡಿ.ಕೆ.ಶಿವಕುಮಾರ್, ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗುತ್ತಿದ್ದಂತೆ ಈ ವಿಚಾರವನ್ನು ಸಂಪುಟದಲ್ಲಿ ಇಟ್ಟು ನಲ್ಲಹಳ್ಳಿ ಸರ್ವೇ ನಂ. 283ರ 10 ಎಕರೆ ಗೋಮಾಳ ಭೂಮಿಯನ್ನು ಮಂಜೂರು ಮಾಡಿಸಿಕೊಟ್ಟಿದ್ದರು. ಸರ್ಕಾರದಿಂದ ಉಚಿತವಾಗಿ ಭೂಮಿ ಪಡೆದರೆ ಮುಂದೊಂದು ದಿನ ಸಮಸ್ಯೆ ಎದುರಾಗಬಹುದು ಎನ್ನುವ ಕಾರಣಕ್ಕಾಗಿಯೇ ಶೇ.10ರಂತೆ ಒಟ್ಟು 10.80 ಲಕ್ಷ ರೂ.ಗಳನ್ನು ತಾವೇ ಸರ್ಕಾರಕ್ಕೆ ಕಟ್ಟಿ ಕಪಾಲ ಬೆಟ್ಟ ಅಭಿವೃದ್ಧಿ ಸಮಿತಿಗೆ ಮಂಜೂರು ಮಾಡಿಸಿದ್ದರು. ಡಿ.21ರಂದು ಟ್ರಸ್ಟ್ ಹೆಸರಿಗೆ ಖಾತೆಯೂ ಆಗಿದೆ. ಇಡಿ(ಜಾರಿ ನಿರ್ದೇಶನಾಲಯ) ಇಡಿತಕ್ಕೊಳಪಟ್ಟು ಹೊರ ಬಂದ ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಮುಂದಾಗುವ ಮೂಲಕ ಡಿ.ಕೆ.ಶಿವಕುಮಾರ್, ವಿವಾದ ಮೈಮೇಲೆ ಎಳೆದುಕೊಂಡರು.
ಯೇಸು ಪ್ರತಿಮೆ ನಿರ್ಮಾಣ ವಿರೋಧಿಸಿ ಕಳೆದ ಜನವರಿಯಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಆದರೂ ಪಟ್ಟುಬಿಡದ ಡಿಕೆಶಿ, ಕಪಾಲಬೆಟ್ಟದ ಗೋಮಾಳ ಜಾಗದಲ್ಲೇ ಯೇಸು ಪ್ರತಿಮೆ ನಿರ್ಮಾಣ ಆಗುತ್ತೆ. ಯಾವ ಅಡ್ಡಿಯೂ ಆಗುವುದಿಲ್ಲ ಎಂದು ಅಂದು ಘೋಷಿಸಿದ್ದರು. ಯೇಸು ಪ್ರತಿಮೆ ನಿರ್ಮಾಣ ವಿವಾದ ಸಾರ್ವಜನಿಕ ವಲಯದ ಜತೆಗೆ ರಾಜಕಾರಣದಲ್ಲೂ ಭಾರೀ ಕಂಪನ ಮೂಡಿಸಿತ್ತು.
ಹಾರೋಬೆಲೆ ಗ್ರಾಮದ ನಿವಾಸಿಗಳಾದ ಆಂಥೋಣಿ ಸ್ವಾಮಿ ಸೇರಿ 8 ಮಂದಿ, ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್‌ಗೆ 10 ಎಕರೆ ಗೋಮಾಳ ಜಮೀನು ಮಂಜೂರನ್ನು ಪ್ರಶ್ನಿಸಿ ಪಿಐಎಲ್ ಸಲ್ಲಿಸಿದ್ದರು. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಬರೆದ ಪತ್ರ ಆಧರಿಸಿ 10 ಎಕರೆ ಸರ್ಕಾರಿ ಜಮೀನನ್ನು ಖಾಸಗಿ ಟ್ರಸ್ಟ್‌ಗೆ ಮಂಜೂರು ಮಾಡಲಾಗಿದೆ. ವಾಸ್ತವದಲ್ಲಿ ಯಾವುದೇ ಕ್ರೈಸ್ತ ಧರ್ಮೀಯರು ಜಾಗ ಮಂಜೂರು ಮಾಡುವಂತೆ ಮನವಿ ಸಲ್ಲಿಸಿಲ್ಲ. ಡಿಕೆ ಸಹೋದರರು ತಮ್ಮ ಸ್ವಹಿತಾಸಕ್ತಿ, ರಾಜಕೀಯ ಸ್ವಾರ್ಥ ಮತ್ತು ಮತಬ್ಯಾಂಕ್‌ಗಾಗಿ ಟ್ರಸ್ಟ್‌ಗೆ ಜಮೀನು ಮಂಜೂರು ಮಾಡಲು ರಾಮನಗರದ ಜಿಲ್ಲಾಧಿಕಾರಿಗೆ 2017ರಲ್ಲಿ ಪತ್ರ ಬರೆದಿದ್ದಾರೆ. ಹುಲ್ಲುಗಾವಲು ಪ್ರದೇಶವಾಗಿರುವ ಕಪಾಲಬೆಟ್ಟವನ್ನು ಸುತ್ತಲಿನ ಗ್ರಾಮಗಳ ಜಾನುವಾರುಗಳ ಮೇವಿಗೆ ಮೀಸಲಿಡಲಾಗಿದೆ. ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳ ವೈಯಕ್ತಿಕ ಲಾಭ ಅಥವಾ ಯಾವುದೇ ಧಾರ್ಮಿಕ ಚಟುವಟಿಕೆಗೆ ಬಳಕೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ಗಳು ಆದೇಶಿಸಿವೆ. ಆದ್ದರಿಂದ, ಟ್ರಸ್ಟ್‌ಗೆ ಜಮೀನು ಮಂಜೂರು ಮಾಡಿರುವ ಸರ್ಕಾರದ ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಸೋಮವಾರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ವಿಭಾಗೀಯ ಪೀಠವು, ಹೈಕೋರ್ಟ್ ಅನುಮತಿ ಇಲ್ಲದೆ ಯಾವುದೇ ಕಾಮಗಾರಿ ನಡೆಸಬಾರದು ಎಂದು ಮಧ್ಯಂತರ ಆದೇಶ ನೀಡಿದೆ. ಅಲ್ಲದೆ, ಪ್ರತಿವಾದಿಗಳಾದ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಮನಗರ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಹಾಗೂ ಹಾರೋಬೆಲೆ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್‌ಗೆ ನೊಟೀಸ್ ನೀಡಿದೆ.