

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಕನ್ಯಾನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದ ತಡೆಗೋಡೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭ ಕೆಡವಿದ್ದಾರೆ. ಅತೀ ಸಮೀಪ ಹೆದ್ದಾರಿ ಇರುವುದರಿಂದ ಸಣ್ಣ ಮಕ್ಕಳೀಗೆ ಅಪಾಯವಾಗುತ್ತಿದೆ. ಶೀಘ್ರವೇ ಕಾಂಪೌಂಡ್ ನಿರ್ಮಿಸಬೇಕಿದ್ದು, ಜತೆಗೆ ಆಟದ ಮೈದಾನ ನಿರ್ಮಿಸಿಕೊಡುವಂತೆ ಒತ್ತಾಯಿಸಲಾಯಿತು.
ಚಾರ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಮಹಿಳಾ ಮತ್ತು ಮಕ್ಕಳ ವಿಶೇಷ ಹಕ್ಕುಗಳ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಗಳು ಮನವಿ ಮಾಡಿದರು.
ಗಾಂಧಿನಗರ ಶಾಲೆಯಲ್ಲಿ ಬೀದಿನಾಯಿಗಳ ಕಾಟ ಇದ್ದು, ಮಕ್ಕಳಿಗೆ ಕಚ್ಚುವ ಭೀತಿ ಇದೆ. ಶಾಲೆಯ ಮೇಲ್ಛಾವಣಿ ದುರಸ್ತಿ ಮಾಡಬೇಕಿದ್ದು, ಸುಣ್ಣ ಬಣ್ಣ ಬಳಿದು ಶಾಲೆಯನ್ನು ಉಳಿಸಬೇಕಿದೆ. ವಂಡಾರುಬೆಟ್ಟು ಶಾಲೆ ಸಮೀಪ ಚಿರತೆಗಳ ಹಾವಳಿಯಿದ್ದು, ವಿದ್ಯಾರ್ಥಿಗಳು ಜೀವ ಭಯದಿಂದ ಸಂಚರಿಸುವಂತಾಗಿದೆ. ನೀರಿನ ಸಮಸ್ಯೆ ಹಾಗೂ ಸೋಲಾರ್ ಲೈಟಿನ ತೊಂದರೆ ಸರಿಪಡಿಸಿ ಎಂದು ವಿದ್ಯಾರ್ಥಿಗಳಾದ ಶ್ರೇಯಾ ಮತ್ತು ಚರಣ್ ಆಗ್ರಹಿಸಿದರು.
ಚಾರ ಗ್ರಾಪಂ ಅಧ್ಯಕ್ಷ ದಿನೇಶ್ ಶೆಟ್ಟಿ ಹುತ್ತುರ್ಕೆ ಪ್ರತಿಕ್ರಿಯಿಸಿ, ಸಂಪನ್ಮೂಲ ಕ್ರೋಡೀಕರಿಸಿ ಬಳಿಕ ವಿದ್ಯಾರ್ಥಿಗಳ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಪೂರೈಸಲಾಗುವುದು. ಮಕ್ಕಳು ತಮ್ಮ ಹಕ್ಕುಗಳ ಜತೆಗೆ ಕರ್ತವ್ಯಕ್ಕೂ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು. ಉಪಾಧ್ಯಕ್ಷ ಕೃಷ್ಣ ನಾಯ್ಕ, ಸದಸ್ಯರಾದ ಸಂತೋಷ್ ಶೆಟ್ಟಿ, ಕುಸುಮಾ ಪ್ರಭು, ಶಶಿಕಲಾ ಪೂಜಾರಿ, ಸುಮಲತಾ, ದೇವದಾಸ್ ಶೆಟ್ಟಿ, ಮಮತಾ ಶೆಟ್ಟಿ, ಜಯಲಕ್ಷ್ಮೀ, ಪಿಡಿಒ ಅಶೋಕ್, ಸಿಬ್ಬಂದಿ ಉಪಸ್ಥಿತರಿದ್ದರು.
ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಉಂಟಾದರೆ ತಕ್ಷಣದಲ್ಲಿ ಸಂಬಂಧಪಟ್ಟ ಇಲಾಖೆ, ಪಾಲಕರ ಅಥವಾ ಶಿಕ್ಷಕರ ಗಮನಕ್ಕೆ ತರಬೇಕು. ಬಾಲ್ಯವಿವಾಹ ಕಂಡು ಬಂದರೆ ಸಹಾಯವಾಣಿಗೆ ಮಾಹಿತಿ ನೀಡಬೇಕು. ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ರಕ್ಷಣೆಯ ಸಮಿತಿ ರಚನೆ ಮಾಡಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ವಸಂತಿ ಹೇಳಿದರು.
ಹೆಬ್ರಿ ತಾಲೂಕಿನಲ್ಲಿ ಅತೀ ಹೆಚ್ಚು ಕಾರ್ಖಾನೆಗಳು ಇದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ, ಅಧಿಕಾರಿಗಳು ಅಗ್ನಿಶಾಮಕ ಠಾಣೆ ಸ್ಥಾಪಿಸಲು ಮುತುವರ್ಜಿ ವಹಿಸಬೇಕು ಎಂದು ಸ್ಥಳೀಯ ಮಹಿಳೆಯರು ಒತ್ತಾಯಿಸಿದರು.
ಮಂಡಾಡಿಜೆಡ್ಡು ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಸೂಕ್ತ ಶೌಚಗೃಹ ನಿರ್ಮಾಣ ಮಾಡಿಕೊಡಬೇಕಿದೆ. ಜತೆಗೆ ಕೊಂಡೆಜೆಡ್ಡು ಶಾಲೆಯಲ್ಲಿ ಶುದ್ಧ ಕುಡಿಯುವ ನೀರು ಪಡೆಯಲು ಬಾವಿ ಅಗತ್ಯವಿದೆ ಎಂದು ವಿದ್ಯಾರ್ಥಿಗಳು ಸಮೂಹಿಕವಾಗಿ ಮನವಿ ಮಾಡಿದರು.