

ಬಂಟ್ವಾಳ: ಈ ಶಾಲೆಯಲ್ಲಿ ಮಕ್ಕಳ ಕೊರತೆ ಇದೆ. ಇದನ್ನು ಬೀಗ ಹಾಕಿ ಮುಚ್ಚುವುದೇ ಒಳ್ಳೆಯದು ಎಂಬ ನಿರ್ಧಾರಕ್ಕೆ ಶಿಕ್ಷಣ ಇಲಾಖೆ ಬಂದು ಸಿದ್ಧತೆ ನಡೆಸಿತ್ತು. ಸುತ್ತಮುತ್ತಲಿನ ಮನೆಯವರೂ ಹತ್ತಿರದ ವಾಹನ ಸೌಲಭ್ಯ ಇರುವ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಅಣಿಯಾಗಿದ್ದರು. ಕೆಲವರು ಸೇರಿಸಿದ್ದರು. ಆದರೆ ಐದು ಮಕ್ಕಳಿರುವ ಶಾಲೆಯಲ್ಲಿ ಒಂದೇ ವರ್ಷದಲ್ಲಿ ಮಕ್ಕಳ ಸಂಖ್ಯೆ 22 ಆಯಿತು. ಈಗ ಶಾಲೆಯ ಎರಡು ಕೊಠಡಿಗಳಲ್ಲೂ ಮಕ್ಕಳ ಕಲರವ. ಇದು ಬಂಟ್ವಾಳ ತಾಲೂಕಿನ ಬಾಳ್ತಿಲ ಕಂಟಿಕದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹೊಸರೂಪ.
ಒಂದು ವರ್ಷದ ಹಿಂದೆ ಜೂನ್ ತಿಂಗಳಲ್ಲಿ ಕಂಟಿಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಐವರು ಮಕ್ಕಳಷ್ಟೇ ಇದ್ದರು. ಈ ಶಾಲೆ ನಿರ್ವಹಣೆ ಕಷ್ಟವಾಗತೊಡಗಿದ್ದು ಸಹಜವೂ ಹೌದು. ಇನ್ನೇನು ಮುಚ್ಚುತ್ತದೆ ಎಂಬ ಹಂತಕ್ಕೆ ತಲುಪಿತ್ತು.
ಪಕ್ಕದ ಶಾಲೆಯಿಂದ ಈ ಶಾಲೆಗೆ ವರ್ಗವಾಗಿ ಬಂದ ಶಿಕ್ಷಕಿ ಚೇತನಾ ಸಣ್ಣ ಅಭಿಯಾನವನ್ನೇ ಶಾಲೆ ಉಳಿಸಲು ಕೈಗೊಂಡರು. ಆ ಪ್ರಯತ್ನ ಫಲ ನೀಡಿತು. ಕಳೆದ ವರ್ಷ ಏಳು ಮಕ್ಕಳು ಸೇರಿದರೆ, ಈ ವರ್ಷ ಹತ್ತು ಮಕ್ಕಳ ಸೇರ್ಪಡೆಯಾದರು. 22 ಮಕ್ಕಳು ಒಂದನೇ ತರಗತಿಯಿಂದ ಐದನೇ ತರಗತಿಯಿರುವ ಶಾಲೆಯಲ್ಲಿ ಹಂಚಿಹೋದರು. ಎಲ್ಲ ಮಕ್ಕಳಿಗೂ ಯೋಗ ಶಿಕ್ಷಣದಿಂದ ತೊಡಗಿ, ಪಾಠಕ್ಕೆ ಅನುಕೂಲವಾಗುವ ವ್ಯವಸ್ಥೆ ಕಲ್ಪಿಸಲಾಯಿತು. ಇದೀಗ ಶಾಲೆ ಕಟ್ಟಡದ ಸ್ವರೂಪವೇ ಬದಲಾಗಿದೆ. ಸುಣ್ಣ, ಬಣ್ಣ, ಚಿತ್ರಗಳಿಂದ ಆಕರ್ಷಕವಾಗಿ ಕಾಣಿಸುತ್ತಿದೆ. ಮಕ್ಕಳೂ ಲವಲವಿಕೆಯಿಂದ ಪಾಠ ಕಲಿಯುತ್ತಿದ್ದಾರೆ.
ಇಬ್ಬರು ಶಿಕ್ಷಕರು ಇರಬೇಕಿದ್ದು, ಓರ್ವ ಶಿಕ್ಷಕಿ ಪ್ರಭಾರ ಮುಖ್ಯಶಿಕ್ಷಕಿ ನೆಲೆಯಲ್ಲಿ ನಿಯುಕ್ತಿಗೊಂಡಿದ್ದಾರೆ. ಓರ್ವ ಅತಿಥಿ ಶಿಕ್ಷಕಿ ಈ ವರ್ಷ ನೇಮಕಗೊಂಡಿದ್ದರೆ, ಗೌರವ ಶಿಕ್ಷಕಿಯೊಬ್ಬರನ್ನು ಪ್ರಭಾರ ಮುಖ್ಯ ಶಿಕ್ಷಕಿಯ ಮುತುವರ್ಜಿಯಿಂದ ನೇಮಿಸಲಾಗಿದೆ.
ಶಿಕ್ಷಕರೊಬ್ಬರು ಮನಸ್ಸು ಮಾಡಿದರೆ, ಶಾಲೆ ಅಭಿವೃದ್ಧಿ ಹೇಗೆ ಸಾಧ್ಯ ಎಂಬುದನ್ನು ಇಲ್ಲಿಗೆ ವರ್ಗಾವಣೆಯಾಗಿ ಆಗಮಿಸಿದ ಶಿಕ್ಷಕಿ ಚೇತನಾ ಸಾಧಿಸಿ ತೋರಿಸಿದ್ದಾರೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು. ಆರಂಭದಲ್ಲಿ ಐವರು ಮಕ್ಕಳಿರುವುದನ್ನು ಗಮನಿಸಿ, ಊರವರ ಮನವೊಲಿಸಿದ ಫಲವಾಗಿ ಕಳೆದ ವರ್ಷ 5ನೇ ತರಗತಿ ವರೆಗೆ 7 ಮಕ್ಕಳು ಸೇರ್ಪಡೆಗೊಂಡರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಹೀಗೆ ಮಕ್ಕಳ ಸಂಖ್ಯೆ 5ರಿಂದ 13ಕ್ಕೇರಿತು.
1964, ಜೂನ್ 10ರಂದು ಶಾಲೆ ಆರಂಭಗೊಂಡಿತ್ತು ಎನ್ನುತ್ತದೆ ಇಲ್ಲಿದ ದಾಖಲೆಗಳು. ಈ ಶಾಲೆ ವ್ಯಾಪ್ತಿಯಲ್ಲಿ 1 ಎಕರೆ 18 ಸೆಂಟ್ಸ್ ಜಾಗವಿದೆ. ಶಾಲೆ ಇರುವ ಜಾಗದ ಆವರಣದಲ್ಲೇ ಅಂಗನವಾಡಿ ಒಂದಿದೆ. ಹಾಗೆಯೇ ಕೃಷಿ ಚಟುವಟಿಕೆ ನಡೆಸಿ, ಮಕ್ಕಳ ಬಿಸಿಯೂಟಕ್ಕೆ ಬೇಕಾದ ತರಕಾರಿ ಬೆಳೆಯಲು ಸಾಕಷ್ಟು ಅವಕಾಶಗಳೂ ಇವೆ. ಕಂಟಿಕ, ಸುಧೆಕಾರು, ಕಾಂಪ್ರಬೈಲ್ ಪ್ರದೇಶಗಳು ಶಾಲಾ ವ್ಯಾಪ್ತಿಗೆ ಬರುವ ಜನವಸತಿ ಸ್ಥಳಗಳು. ಇದೀಗ ಈ ಪ್ರದೇಶಗಳಿಂದ ಮಕ್ಕಳು ಬರಲಾರಂಭಿಸಿದ್ದಾರೆ.
ಮಕ್ಕಳು ಓಡಾಡಲು ಶಿಕ್ಷಕಿಯೇ ಸ್ವತಃ ಆಟೊ ವ್ಯವಸ್ಥೆ ಕಲ್ಪಿಸಿದರು. ಶಾಲೆಗೆ ಆಗಮಿಸಲು ವಾಹನ ಇದೆ ಎಂದಾದಾಗ ಮಕ್ಕಳ ಸಂಖ್ಯೆ ಹೆಚ್ಚಾಯಿತು. ಈ ವರ್ಷ ಹತ್ತು ಮಕ್ಕಳು ಸೇರ್ಪಡೆಯಾದರು. ಈ ಮಧ್ಯೆ ದಾನಿಗಳ ನೆರವಿನಿಂದ ಶಾಲೆಗೆ ನೆಲಹಾಸು ಮತ್ತಿತರ ಸೌಕರ್ಯಗಳು ದೊರಕಿದರೆ, ಶಿಕ್ಷಕಿಯೇ ಸ್ವತಃ ಮುತುವರ್ಜಿ ವಹಿಸಿ, ಶಾಲೆಗೆ ವರ್ಣಚಿತ್ತಾರ ಮಾಡಿಸಿದರು. ಬಾಗಿದ ಫಲಭರಿತ ಕಲ್ಪವೃಕ್ಷಗಳ ಚಿತ್ರಗಳು ಶಾಲೆಯ ಎರಡು ಬಾಗಿಲುಗಳ ಪಕ್ಕ ಗಮನ ಸೆಳೆಯುತ್ತವೆ. ತೆಂಗಿನಮರದ ತುಂಬ ಫಲಗಳಲ್ಲಿ ತಾಳ್ಮೆ, ಪ್ರೀತಿ, ನಿಸ್ವಾರ್ಥ, ಕ್ಷಮೆ, ಸತ್ಯ, ಸಾಮರಸ್ಯ, ಪ್ರಾಮಾಣಿಕತೆ, ನ್ಯಾಯ, ನೀತಿ ಸಹಿತ ಜೀವನದಲ್ಲಿ ನಾವು ಯಾವುದನ್ನು ಅನುಸರಿಸಬೇಕು ಎಂಬ ಶಬ್ದಗಳು ಬರೆದಿರುವುದು ಕಾಣಸಿಗುತ್ತವೆ. ಶಾಲೆಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಲು ಚಿತ್ರಗಳು ಪೂರಕವಾಗಿದೆ.