

ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ಮತ್ತು ರಿಷಭ್ ಶೆಟ್ಟಿ ಅಭಿನಯದ 'ಕಾಂತಾರ' ಚಿತ್ರವು ಈಗಾಗಲೇ ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಅಮೇಜಾನ್ ಪ್ರೈಮ್ನಲ್ಲಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯ ಅವತರಣಿಕೆಗಳು ಮತ್ತು ನೆಟ್ಫ್ಲಿಕ್ಸ್ನಲ್ಲಿ ಹಿಂದಿ ಅವತರಣಿಕೆ ಬಿಡುಗಡೆಯಾಗಿತ್ತು. ಚಿತ್ರವು ಟಿವಿಯಲ್ಲಿ ಪ್ರಸಾರವಾಗುವುದು ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು.
ಇದನ್ನೂ ಓದಿ: ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿದ ‘ಕಾಂತಾರ’ …
ಈಗ ಆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ದು, ಇದೇ ಜನವರಿ 15 ರಂದು ಸಂಜೆ 6 ಗಂಟೆಗೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದೆ.
ತುಳುನಾಡಿನ ಪ್ರಾಂತ್ಯದಲ್ಲಿ ನಡೆಯುವ ದೈವಾರಾಧನೆ, ಭೂತಕೋಲ, ಕಂಬಳ, ಕೋಳಿ ಅಂಕ, ಇತ್ಯಾದಿ ಆಚರಣೆಗಳ ಹಿನ್ನೆಲೆಯಲ್ಲಿ ನಡೆಯುವ ಕಥೆ ಇದಾಗಿದ್ದು, ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರವು ಅತೀ ಹೆಚ್ಚು ವೀಕ್ಷಣೆಗೊಳಗಾಗುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯೊಂದನ್ನೇ ಬರೆದಿದೆ.
'ಕಾಂತಾರ' ಚಿತ್ರವನ್ನು ಹೊಂಬಾಳೆ ಫಿಲಂಸ್ನ ವಿಜಯ್ ಕುಮಾರ್ ಕಿರಗಂದೂರು ನಿರ್ಮಿಸಿದ್ದು, ರಿಷಭ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಮುಂತಾದವರು ಅಭಿನಯಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.
ಸೆ. 30ರಂದು ಜಗತ್ತಿನಾದ್ಯಂತ ಬಿಡುಗಡೆಯಾದ 'ಕಾಂತಾರ' ಚಿತ್ರದ ಕನ್ನಡ ಅವತರಣಿಕೆಯು ಇದೀಗ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಪ್ರದರ್ಶನವಾಗುತ್ತಿದೆ.