

Kantara Chapter 1: ಅಕ್ಟೋಬರ್ 2ರಂದು ಭಾರತಾದ್ಯಂತ ಬಿಡುಗಡೆಗೊಂಡ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ‘ಕಾಂತಾರ ಚಾಪ್ಟರ್ 1’ ಇದೀಗ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುವತ್ತ ಮುಖಮಾಡಿದೆ. ಮೊದಲ ದಿನವೇ ದೇಶದಲ್ಲಿ 61.85 ಕೋಟಿ ರೂ. ಗಳಿಕೆ ಕಂಡ ಕಾಂತಾರ, ವಾರಾಂತ್ಯ ಪೂರ್ಣಗೊಳ್ಳುವ ಮೊದಲೇ ಈ ವರ್ಷದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಚಿತ್ರಗಳಲ್ಲಿ ಒಂದು ಎಂಬ ಸಾಲಿಗೆ ಸನ್ನಿಹಿತವಾಗಿದೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ಮಿಂಚಿದ್ದಾರೆ. ಜಯರಾಮ್, ಗುಲ್ಶನ್ ದೇವಯ್ಯ ಸೇರಿದಂತೆ ಮುಂತಾದ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಸಿನಿಪ್ರಿಯರಿಂದ ವ್ಯಾಪಕ ಮೆಚ್ಚುಗೆ, ಪ್ರಶಂಸೆಗಳು ಹರಿದುಬರುತ್ತಿವೆ. ಈ ಮಧ್ಯೆ, ಭಾರತೀಯ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂ. ಕ್ಷಬ್ ಸೇರಿರುವ ಕಾಂತಾರ 1, ಶುಕ್ರವಾರದ ಅಂತ್ಯಕ್ಕೆ 107 ಕೋಟಿ ರೂ. ಗಳಿಕೆ ಕಂಡಿದೆ.
ಚಿತ್ರವು ದೇಶದಲ್ಲಿ 107 ಕೋಟಿ ಕಲೆಕ್ಷನ್ ಮಾಡಿದ್ದು, ಇದರಲ್ಲಿ ದಸರಾ ಹಬ್ಬದ ದಿನವೇ 61.85 ಕೋಟಿ ರೂ. ಗಳಿಸಿದೆ. ಮತ್ತು ಶುಕ್ರವಾರ 46 ಕೋಟಿ ರೂ. ದಾಖಲಿಸಿದೆ. ಸಕ್ನಿಲ್ಕ್ ವರದಿ ಪ್ರಕಾರ, ಶನಿವಾರ (ಸೆ.04) ಸಂಜೆ 5 ಗಂಟೆಯ ವೇಳೆಗೆ 26.32 ಕೋಟಿ ರೂ. ಗಳಿಕೆಯಾಗಿದ್ದು, ದೇಶದಲ್ಲಿ ಕಳೆದ ಮೂರು ದಿನಗಳಲ್ಲಿ ಚಿತ್ರದ ಒಟ್ಟು ಗಳಿಕೆ ಇದೀಗ 134.17 ಕೋಟಿ ರೂ.ಗೆ ತಲುಪಿದೆ.
ಪ್ರಸ್ತುತ, ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಾಂತಾರ 1, ಮೊದಲ ಎರಡು ದಿನಗಳಲ್ಲಿ 2.5 ಮಿಲಿಯನ್ ಡಾಲರ್ (ಅಂದರೆ ಸುಮಾರು 22 ಕೋಟಿ ರೂ.) ಗಳಿಸಿದೆ. ವಾರಾಂತ್ಯದಲ್ಲಿ ಈ ಸಂಖ್ಯೆಗಳು ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ವರದಿಗಳು ಉಲ್ಲೇಖಿಸಿವೆ.
'ಕಾಂತಾರ ಚಾಪ್ಟರ್ 1' ಚಿತ್ರದಲ್ಲಿ ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ಜಯರಾಮ್, ಕಿಶೋರ್, ರಾಕೇಶ್ ಪೂಜಾರಿ, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಸಂಗೀತ ನೀಡಿದ್ದು, ವಿಜಯ್ ಕಿರಂಗದೂರು ನಿರ್ಮಾಣ ಮಾಡಿದ್ದಾರೆ,(ಏಜೆನ್ಸೀಸ್).