

ನಟಿ ಪಾರೂಲ್ ಯಾದವ್ ಮೂಲತಃ ಉತ್ತರ ಭಾರತದವರು. ಇದೀಗ ಕರ್ನಾಟಕವೇ ಅವರ ಕರ್ಮಭೂಮಿ. ಕನ್ನಡ ಭಾಷೆ ಕಲಿತು ಭಾಷಾ ಪ್ರೇಮ ಮೆರೆದಿದ್ದಾರೆ. ಇತ್ತ ಕನ್ನಡತಿ ಧಾರಾವಾಹಿ ಮೂಲಕವೇ ಕಿರುತೆರೆ ಪ್ರೇಕ್ಷಕರನ್ನು ಸೆಳೆದಿದ್ದಾರೆ ನಟಿ ರಂಜನಿ. ಈ ನಟಿಯರು ಕನ್ನಡ ಅಭಿಮಾನದ ಕುರಿತು ವಿಜಯವಾಣಿ ಜತೆ ಮಾತನಾಡಿದ್ದಾರೆ.
ಕರ್ನಾಟಕ ನನ್ನ ಕರ್ಮಭೂಮಿ: ನಾನು ಮೂಲತಃ ಉತ್ತರ ಭಾರತದವಳಾದರೂ, ನೆಲೆ ಕಂಡುಕೊಂಡಿದ್ದು ಕರ್ನಾಟಕದಲ್ಲಿ. ಕನ್ನಡ ಸಿನಿಮಾ ಮೂಲಕ ಗುರುತಿಸಿಕೊಂಡಿದ್ದೇನೆ. ಹಾಗಾಗಿ ಕರ್ನಾಟಕ ನನ್ನ ಕರ್ಮಭೂಮಿ. ನಾವು ಯಾವ ಭಾಷೆಯಲ್ಲಿ ಸಿನಿಮಾ ಮಾಡುತ್ತೇವೋ ಆ ಭಾಷೆಯನ್ನು ಕಲಿತು, ಮಾತನಾಡಿದರೆ, ಇಡೀ ಪ್ರೇಕ್ಷಕ ಸಮುದಾಯಕ್ಕೆ ನಾವು ಹತ್ತಿರವಾಗುತ್ತೇವೆ. ನಮ್ಮ ಹುಡುಗಿ ಎಂಬ ಆಪ್ತ ಭಾವ ಬೆಳೆಯುತ್ತದೆ. ಹಾಗಾಗಿ ನಾನು ಇಂದಿಗೂ ಕನ್ನಡವನ್ನು ಕಲಿಯುತ್ತಿದ್ದೇನೆ. ನನ್ನ ಸಿನಿಮಾಗಳಿಗೆ ನಾನೇ ಡಬ್ ಮಾಡಬೇಕೆಂಬುದು ನನ್ನ ಆಸೆ. ಅದನ್ನು ಈಡೇರಿಸಿಕೊಳ್ಳುವ ಕಾತರದಲ್ಲಿದ್ದೇನೆ. ಇನ್ನು ಆರಂಭದಲ್ಲಿ ಭಾಷೆಯ ಕಲಿಯುವಿಕೆಯಲ್ಲಿ ಸಮಸ್ಯೆ ಆಗಿತ್ತು. ಏನು ಮಾತನಾಡುತ್ತಿದ್ದಾರೆ ಎಂಬುದು ತಿಳಿಯುತ್ತಿರಲಿಲ್ಲ. ಈಗ ಕನ್ನಡದಲ್ಲಿ ಏನೇ ಮಾತನಾಡಿದರೂ ನಾನು ಪ್ರತಿಕ್ರಿಯೆ ನೀಡಬಲ್ಲೆ ಎನ್ನುವ ನಟಿ ಪಾರೂಲ್ ಯಾದವ್, ಹೊಸ ಕಲಾವಿದರಿಗೆ ಒಂದಷ್ಟು ಕಿವಿಮಾತು ಹೇಳಿದ್ದಾರೆ. ನೀವು ಕೆಲಸ ಮಾಡುವ ನೆಲದಲ್ಲಿ, ಆ ಭಾಗದ ಮೇಕಪ್ ಕಲಾವಿದರು ಮತ್ತು ಹೇರ್ ಸ್ಟೈಲಿಸ್ಟ್ ಗಳನ್ನೇ ನೇಮಕ ಮಾಡಿಕೊಳ್ಳಿ. ಅವರೊಂದಿಗೆ ಮಾತನಾಡುತ್ತಲೇ ನಾನೂ ಕನ್ನಡ ಕಲಿತಿದ್ದು. ಆಟಗಾರ ಸಿನಿಮಾ ಶೂಟಿಂಗ್ ವೇಳೆ ಇಡೀ ದಿನ ಕನ್ನಡದಲ್ಲಿಯೇ ಮಾತನಾಡಿ ಎಂಬ ಟಾಸ್ಕ್ ನೀಡಿದ್ದರು. ಈಗಲೂ ಅದು ನೆನಪಾಗುತ್ತದೆ. ನಾನೀಗ ಕನ್ನಡತಿ, ಕರ್ನಾಟಕದ ಜನ ನನ್ನನ್ನು ಒಪ್ಪಿಕೊಂಡಿದ್ದಕ್ಕೆ ನಾನು ಅವರೆಲ್ಲರಿಗೆ ಋಣಿ ಎಂದಿದ್ದಾರೆ.
ವರ್ಷಪೂರ್ತಿ ಕನ್ನಡಿಗರಾಗೋಣ: ಕರ್ನಾಟಕದಲ್ಲಿ ಕನ್ನಡ ಭಾಷೆಯ ಸ್ಥಿತಿ ಶೋಚನೀಯ ಸ್ಥಿತಿಯಲ್ಲಿದೆ. ಅದನ್ನು ಬಳಸುವಿಕೆಯಲ್ಲಿ ತಾಳ ತಪ್ಪುತ್ತಿದೆ. ಕನ್ನಡದ ಜತೆಗೆ ಇಂಗ್ಲಿಷ್ ಭಾಷೆ ಬಳಸಿದರೆ ಅವರು ಸುಶಿಕ್ಷಿತರು, ಎಲ್ಲವನ್ನು ತಿಳಿದವರು ಎಂದಲ್ಲ. ಅದು ಕನ್ನಡ ಭಾಷೆ ಅವನತಿಯತ್ತ ಸಾಗುತ್ತಿದೆ ಎಂದರ್ಥ. ಯಾರಾದರೂ ಸ್ವಚ್ಛವಾಗಿ, ಮಾತನಾಡುವಾಗ ಹೆಚ್ಚು ಕನ್ನಡವನ್ನೇ ಬಳಸುತ್ತಾರೆಂದರೆ ಅವರಿಗೆ ಬೇರೆ ಭಾಷೆ ಬರುವುದಿಲ್ಲ ಎಂದಲ್ಲ. ವ್ಯವಹಾರಿಕ ಭಾಷೆಯಾಗಿ ಇಂಗ್ಲಿಷ್ ವ್ಯಾಪಿಸುತ್ತಿದ್ದರೆ, ಕನ್ನಡ ನಶಿಸುತ್ತಿದೆ. ಬೇರೆ ಭಾಷೆ ಬಗ್ಗೆಯೂ ಗಮನಹರಿಸೋಣ. ಹೆಚ್ಚೆಚ್ಚು ಕನ್ನಡವನ್ನೇ ಬಳಸೋಣ. ಕನ್ನಡತಿ ಧಾರಾವಾಹಿಯಲ್ಲಿಯೂ ನಾವು ಅದನ್ನೇ ಹೇಳುತ್ತಿದ್ದೇವೆ ಎಂದು ನಟಿ ರಂಜನಿ ರಾಘವನ್ ಹೇಳಿದ್ದಾರೆ.