

ಬಾಗಲಕೋಟೆ: ಹಿಂದಿಯಲ್ಲಿ ಭಾಷೆಯಲ್ಲಿ ಮೂಡಿಬರುವ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡಪತಿ (Kaun Banega Crorepati) ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ಯುವಕ 50 ಲಕ್ಷ ರೂ. ಬಹುಮಾನ ಗೆದ್ದು, ಊರಿನ ಜನತೆಯಲ್ಲಿ ಮಂದಹಾಸ ಮೂಡಿಸಿದ್ದಾರೆ.
15 ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟು 50 ಲಕ್ಷ ರೂ. ಗೆದ್ದು ಬೀಗಿದ ಸಾಮಾನ್ಯ ವೆಲ್ಡಿಂಗ್ ಕಾರ್ಮಿಕರ ಮಗನಿಗೆ ವ್ಯಾಪಕ ಮೆಚ್ಚುಗೆ ಹರಿದುಬಂದಿವೆ. ನಗದು ಬಹುಮಾನ ಪಡೆದ ವಿಜೇತ ಯುವಕನ ಹೆಸರು ರಮ್ಜಾನ್ ಮಲಿಕಸಾಬ್ ಪೀರಜಾದೆ. ಚಹಾದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಮ್ಜಾನ್, ಇದಕ್ಕೂ ಮೊದಲು ಬ್ಯಾಡ್ಮಿಂಟನ್ ಕೋರ್ಟ್ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಇದರ ಜತೆಗೆ ಪೆಟ್ರೋಲ್ ಬಂಕ್ನಲ್ಲಿ ಕೂಡ ಕೆಲಸ ನಿರ್ವಹಿಸುತ್ತಿದ್ದರು.
ಸದ್ಯ ಬಿ.ಎ ಪದವಿ ಮುಗಿಸಿ ಧಾರವಾಡದಲ್ಲಿ ಕೆಎಎಸ್ ಪರೀಕ್ಷೆಗೆ ತರಬೇತಿ ಪಡೆಯಲು ಹೋಗಿದ್ದ ರಮ್ಜಾನ್, ಅಲ್ಲಿನ ವಾಸ್ತವ್ಯ ಹೂಡಿದ ಮೂರೇ ದಿನಕ್ಕೆ ಕೆಬಿಸಿಗೆ ಆಯ್ಕೆ ಆಗಿದ್ದರು. ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಎದುರು ಹಾಟ್ ಸೀಟ್ನಲ್ಲಿ ಕಾಣಿಸಿಕೊಂಡ ಕನ್ನಡಿಗ, 15 ಕಠಿಣ ಪ್ರಶ್ನೆಗಳಿಗೆ ಉತ್ತರಿಸಿ, ಬರೋಬ್ಬರಿ 50 ಲಕ್ಷ ರೂ. ಹಣವನ್ನು ಬಹುಮಾನವಾಗಿ ಸ್ವೀಕರಿಸಿದ್ದಾರೆ. ರಮ್ಜಾನ್ ಉತ್ತರಿಸಿದ ರೀತಿ, ಬಹುಮಾನ ಗೆದ್ದ ಖುಷಿಯನ್ನು ನೋಡಲು ಸೋನಿ ವಾಹಿನಿಯಲ್ಲಿ ಇದೇ ಜ.13ರಂದು ರಾತ್ರಿ 9ಕ್ಕೆ ಪ್ರಸಾರವಾಗಲಿರುವ ಸಂಚಿಕೆಯನ್ನು ವೀಕ್ಷಿಸಬೇಕಿದೆ.