ತಿಂಗಳ ಕೊನೆಗೆ ಮಜಾ ವರ್ಷದ ಕೊನೆಗೆ ಬಿಗ್ ಬಾಸ್ ಶುರು ಹೌದು ಸ್ವಾಮಿ...

Sudeep
Published on

ಬೆಂಗಳೂರು: ಲಾಕ್​ಡೌನ್​ನಿಂದ ಸ್ತಬ್ಧವಾಗಿದ್ದ ಚಿತ್ರರಂಗ ಮತ್ತು ಕಿರುತೆರೆಗೆ ಸ್ವಲ್ಪ ಜೀವ ಬಂದ ಹಾಗಿದೆ. ಈಗಾಗಲೇ ಚಲನಚಿತ್ರಗಳು ಮತ್ತು ಧಾರಾವಾಹಿಗಳ ಚಿತ್ರೀಕರಣ ಪ್ರಾರಂಭವಾಗಿದ್ದು, ಇದೀಗ ರಿಯಾಲಿಟಿ ಶೋಗಳ ಚಿತ್ರೀಕರಣ ಸಹ ಪ್ರಾರಂಭವಾಗಿದೆ. ಹಿಂದಿಯ ‘ದಿ ಕಪಿಲ್ ಶರ್ವ’ ಕಾರ್ಯಕ್ರಮದ ಚಿತ್ರೀಕರಣ ಶುರುವಾಗಿರುವುದಷ್ಟೇ ಅಲ್ಲ, ಪ್ರಸಾರ ಸಹ ಪ್ರಾರಂಭವಾಗಿದೆ.

ಇನ್ನು ಇದೇ ತಿಂಗಳ ಕೊನೆಗೆ ತೆಲುಗಿನ ‘ಬಿಗ್ ಬಾಸ್’ ಕಾರ್ಯಕ್ರಮ ಶುರುವಾಗಲಿದ್ದು, ಹಿರಿಯ ನಟ ನಾಗಾರ್ಜುನ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಮಧ್ಯೆ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಆದ ‘ಮಜಾ ಟಾಕೀಸ್’ ಸಹ ಇದೇ ತಿಂಗಳಿನಿಂದ ಪ್ರಾರಂಭವಾಗಲಿದೆ. ಈ ಹಿಂದೆ, ಕಲರ್ಸ್ ವಾಹಿನಿಯ ಹೊಸ ಪ್ರೋಮೋಗಳಲ್ಲಿ ಸೃಜನ್ ಕಾಣಿಸಿಕೊಂಡಿದ್ದರು. ಈ ಮೂಲಕ, ಸದ್ಯದಲ್ಲೇ ‘ಮಜಾ ಟಾಕೀಸ್’ ಸಹ ಶುರುವಾಗಲಿದೆ ಎಂದು ಸೂಚನೆ ಕೊಟ್ಟಿದ್ದರು. ಅದರಂತೆ, ಇದೀಗ ಆ ಕಾರ್ಯಕ್ರಮದ ಚಿತ್ರೀಕರಣ ಪ್ರಾರಂಭವಾಗಿದ್ದು, ಹೊಸ ಎಪಿಸೋಡುಗಳ ಪ್ರಸಾರ ಸದ್ಯದಲ್ಲೇ ಶುರುವಾಗಲಿದೆ.

‘ಬಿಗ್ ಬಾಸ್’ ಪ್ರಸಾರ ನಿಜ: ಇನ್ನು ಕಲರ್ಸ್ ಕನ್ನಡದ ಜನಪ್ರಿಯ ಕಾರ್ಯಕ್ರಮವಾದ ‘ಬಿಗ್ ಬಾಸ್’ನ ಎಂಟನೆಯ ಸೀಸನ್ ಸಹ ಇದೇ ವರ್ಷ ಶುರುವಾಗಲಿದೆಯಂತೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಬಿಜಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್, ‘ಸೀಸನ್ 8 ಶುರುವಾಗುವುದೂ ನಿಜ ಮತ್ತು ಆ ಕಾರ್ಯಕ್ರಮವನ್ನು ಸುದೀಪ್ ನಡೆಸಿಕೊಡುವುದೂ ನಿಜ. ಆದರೆ, ಯಾವಾಗ ಎಂದು ಈಗಲೇ ಹೇಳುವುದು ಕಷ್ಟ. ಇನ್ನೂ ಟೈಮ್ೈನ್ ಸಿದ್ಧವಾಗಿಲ್ಲ. ಸ್ವಲ್ಪ ತಡವಾದರೂ ಖಂಡಿತ ಶುರುವಾಗುತ್ತದೆ’ ಎಂದು ಹೇಳುತ್ತಾರೆ. ಇನ್ನು ಇಂತಹ ಸಂದರ್ಭದಲ್ಲಿ ‘ಬಿಗ್ ಬಾಸ್’ ಕಾರ್ಯಕ್ರಮವನ್ನು ರೂಪಿಸುವುದು ದೊಡ್ಡ ಸವಾಲು. ಈ ಕುರಿತು ಮಾತನಾಡುವ ಅವರು, ‘ಸದ್ಯದಲ್ಲೇ ತೆಲುಗು ಮತ್ತು ತಮಿಳು ‘ಬಿಗ್ ಬಾಸ್’ನ ಹೊಸ ಸೀಸನ್​ಗಳು ಪ್ರಾರಂಭವಾಗಲಿವೆ. ಆ ನಂತರ ನಮಗೂ ಒಂದು ಕ್ಲಾರಿಟಿ ಸಿಗುತ್ತದೆ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net