

ಬೆಂಗಳೂರು: ಇಂದು ಕಾವೇರಿ ನೀರಿನ ವಿಚಾರವಾಗಿ ಕರ್ನಾಟಕದಾದ್ಯಂತ ಬಂದ್ ನಡೆಸಲಾಗುತ್ತಿದ್ದು, ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪೊಲೀಸರ ವಶಕ್ಕೆ ಸಿಲುಕಿಕೊಂಡ ಕನ್ನಡ ಪರ ಹೋರಾಟಗಾರರೊಬ್ಬರು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ನಡೆಸಲು ರಸ್ತೆಗಿಳಿದಿದ್ದ ಕನ್ನಡ ಪರ ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು, ಎಲ್ಲರನ್ನೂ ನಗರದ ಫ್ರೀಡಂ ಪಾರ್ಕ್ಗೆ ಕರೆ ತಂದರು. ಈ ವೇಳೆ ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ ಕಾರ್ಯಕರ್ತರೊಬ್ಬರು, ತಮ್ಮ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಆಕ್ರೋಶ ಹೊರಹಾಕಿದರು.
"ನ್ಯಾಯ ದೇವತೆಯ ಕಣ್ಣು ಕಟ್ಟಿದಂತೆ, ಇವತ್ತು ಹೋರಾಟಗಾರರ ಕಣ್ಣೂ ಕಟ್ಟಿದ್ದಾರೆ. ನ್ಯಾಯ ಸಿಗುತ್ತಿಲ್ಲ, ಹೋರಾಟ ಮಾಡಲು ಬಿಡುತ್ತಿಲ್ಲ. ನಮಗೆ ಕುಡಿಯಲು ನೀರಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಕಷ್ಟದ ಪರಿಸ್ಥಿತಿ ಎದುರಾಗಲಿದೆ" ಎಂದು ಹೇಳಿದರು.