ನಷ್ಟ ತುಂಬಿಕೊಡಿ ... ಮಹಾನಗರ ಪಾಲಿಕೆ ಮೇಲೆ ಕಂಗನಾ ಕೇಸ್​

Kangana Final
Published on

ಮುಂಬೈ: ಅಕ್ರಮ ನಿರ್ಮಾಣ ಎಂಬ ಕಾರಣಕ್ಕೆ ತಮ್ಮ ಒಡೆದು ಹಾಕಿರುವ ಬೃಹನ್​​ ಮುಂಬೈ ಮಹಾನಗರ ಪಾಲಿಕೆಯ ವಿರುದ್ಧ ಕಂಗನಾ ರಣಾವತ್​ ತೊಡೆತಟ್ಟಿ ನಿಂತಿದ್ದಾರೆ. ಮುಂಬೈ ಹೈಕೋರ್ಟ್​ಗೆ ಅರ್ಜಿ ಹಾಕಿರುವ ಅವರು, ತಮ್ಮ ಕಚೇರಿಯನ್ನು ಅಕ್ರಮವಾಗಿ ಉರುಳಿಸಿರುವುದರಿಂದ ಎರಡು ಕೋಟಿ ನಷ್ಟವನ್ನು ತುಂಬಿಕೊಡಬೇಕು ಎಂದು ಹೇಳಿದ್ದಾರೆ.

ಕಳೆದ ಬುಧವಾರ, ಮುಂಬೈನ ಪಾಲಿಹಿಲ್​ ಪ್ರದೇಶದಲ್ಲಿರುವ ಕಂಗನಾ ಅವರ ಕಚೇರಿಯಲ್ಲಿ ಅಕ್ರಮ ನಿರ್ಮಾಣವಾಗಿದೆ ಎಂಬ ಕಾರಣಕ್ಕೆ ಪಾಲಿಕೆ ಸಿಬ್ಬಂದಿ ಭಾಗಶಃ ಒಡೆದು ಹಾಕಿದ್ದರು. ಹೀಗೆ ಅರ್ಧಂಬರ್ಧ ಒಡೆದುಹಾಕಲಾಗಿರುವ ಈ ಬಿಲ್ಡಿಂಗ್​ ರಿಪೇರಿ ಮಾಡಿಸದಿರಲು ಕಂಗನಾ ನಿರ್ಧರಿಸಿದ್ದರು.

ಈ ಕುರಿತು ಟ್ವೀಟ್​ ಮಾಡಿದ್ದ ಅವರು, 'ಈ ಅವಧಿಯಲ್ಲಿ ನಾನು ಯಾವುದೇ ಕೆಲಸ ಮಾಡಿಲ್ಲವಾದ್ದರಿಂದ, ಆಫೀಸ್​ ನವೀಕರಣ ಮಾಡಿಸುವುದಕ್ಕೆ ನನ್ನ ಬಳಿ ಹಣ ಇಲ್ಲ. ಅರ್ಧಂಬರ್ಧ ಒಡೆದು ಹಾಕಲಾಗಿರುವ ಆಫೀಸ್​ನಲ್ಲೇ ನಾನು ಕೆಲಸ ಮುಂದುವರೆಸುತ್ತೇನೆ. ದುಷ್ಟಶಕ್ತಿಗಳ ವಿರುದ್ಧ ಒಬ್ಬ ಮಹಿಳೆ ಸಿಡಿದೇಳಬಲ್ಲಳು ಎಂದು ಸಾಂಕೇತಿಕವಾಗಿ ಹೇಳುವುದಕ್ಕೆ ಆ ಕಟ್ಟಡವನ್ನು ನವೀಕರಿಸದಿರಲು ನಿರ್ಧರಿಸಿದ್ದೇನೆ' ಎಂದು ಕಂಗನಾ ಹೇಳಿಕೊಂಡಿದ್ದರು.

ಈಗ ತಮಗಾಗಿರುವ ನಷ್ಟವನ್ನು ಪಾಲಿಕೆಯೇ ಭರಿಸಬೇಕು ಎಂದು ಕಂಗನಾ ಅರ್ಜಿ ಸಲ್ಲಿಸಿದ್ದಾರೆ. 'ಪಾಲಿಕೆಯು ಕಚೇರಿಯ ಶೇ 40ರಷ್ಟು ಭಾಗಕ್ಕೆ ಹಾನಿ ಮಾಡಿದ್ದಾರೆ. ಚಾಂಡಲೇರ್​, ಸೋಫಾ, ಫೇಂಟಿಂಗ್​ಗಳಿಗೆ ಧಕ್ಕೆ ತಂದಿದ್ದಾರೆ. ಅಲ್ಲದೆ, ಹಗೆ ಸಾಧಿಸುವುದಕ್ಕೆ ಇಂಥದ್ದೊಂದು ಕ್ರಮ ತೆಗೆದುಕೊಳ್ಳಲಾಗಿದ್ದು, ಈ ಕುರಿತು ಸೂಕ್ತ ತನಿಖೆಯಾಗಬೇಕಿದೆ ಕಂಗನಾ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net