

ಮುಂಬೈ: ಬಾಲಿವುಡ್ ಹಾಗೂ ರಾಜಕೀಯ ವ್ಯಕ್ತಿಗಳ ಕುರಿತು ಆಗ್ಗಾಗ್ಗೆ ಬಹಿರಂಗವಾಗಿ ಕಟುಟೀಕೆ ಮಾಡುವ ನಟಿ ಕಂಗನಾ ರಣಾವತ್ ಅವರ ಹಳೆ ಟ್ವೀಟ್ ಈಗ ಭಾರೀ ವೈರಲ್ ಆಗುತ್ತಿದೆ.
ಹಿಂದೊಮ್ಮೆ ಮುಂಬೈಯಲ್ಲಿರುವ ಕಂಗನಾ ಕಚೇರಿ ಕಟ್ಟಡವನ್ನು ಅಲ್ಲಿನ ಪಾಲಿಕೆ ನೆಲಸಮಗೊಳಿಸಿತ್ತು. ಈ ವೇಳೆ ರೊಚ್ಚಿಗೆದ್ದ ಕಂಗನಾ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಟ್ವೀಟ್ ಮೂಲಕ ಟೀಕಿಸಿದ್ದರು.
ಇದೀಗ ಮಹಾರಾಷ್ಟ್ರದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿಗೂ, ಕಂಗನಾ ಅಂದು ನೀಡಿದ್ದ ಹೇಳಿಕೆಗೂ ಸಾಮ್ಯತೆ ಇರುವುದರಿಂದ ಈ ವಿಡಿಯೋ ಈಗ ಭಾರೀ ವೈರಲ್ ಆಗುತ್ತಿದೆ. ಕಂಗನಾ ಅಂದು ಹೇಳಿದ್ದ ಮಾತು ಇಂದು ನಿಜವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಭಾರೀ ಸದ್ದು ಮಾಡುತ್ತಿದೆ.
ಸದ್ಯ ಈಗ ಮಹಾರಾಷ್ಟ್ರ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದ್ದು, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಬಾಂದ್ರಾದ ಮಲಬಾರ್ ಹಿಲ್ನಲ್ಲಿರುವ ಖಾಸಗಿ ನಿವಾಸಕ್ಕೆ ಕುಟುಂಬ ಸಮೇತ ತೆರಳಿದ್ದಾರೆ. ಇದು ಈಗ ಕಂಗನಾ ಅವರ ಹೇಳಿಕೆಯನ್ನೇ ಹಿಡಿದು ಟ್ವಿಟ್ಟಿಗರು ಉದ್ಧವ್ ಠಾಕ್ರೆ ಸ್ಥಿತಿಗೂ ಯಾವುದೇ ಭಿನ್ನವಿಲ್ಲ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.
ಅಕ್ರಮ ನಿರ್ಮಾಣದ ಆರೋಪದ ಮೇಲೆ ಮಣಿಕರ್ಣಿಕಾ ಕಚೇರಿಯನ್ನು ಕೆಡವಿದ್ದೀರಿ, ಇಂದು ನನ್ನ ಮೆನೆ ಮುರಿದಿದೆ, ನಾಳೆ ನಿನ್ನ ಅಹಂಕಾರವೂ ಮುರಿಯಲಿದೆ ಎಂದು ನೇರವಾಗಿಯೇ ಅಸಮಾಧಾನ ಹೊರಹಾಕಿದ್ದರು. ಸದ್ಯ ಜಾಲತಾಣದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. (ಏಜೆನ್ಸೀಸ್)