

ಮುಂಬೈ: ಬಿಟೌನ್ ನಟಿ ಕಂಗನಾ ರಣಾವತ್(Kangana Ranaut) ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಸಂಸದೆಯಾಗಿ ಆಯ್ಕೆ ಆಗಿರುವುದು ಗೊತ್ತೆ ಇದೆ. ಸಿನಿಮಾ ಮತ್ತು ರಾಜಕಾರಣ ಎರಡರಲ್ಲೂ ಸಕ್ರಿಯರಾಗಿರುವ ನಟಿ ಹಲವು ಬಾರಿ ತಮ್ಮ ನೇರ ನುಡಿಯಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಸದ್ಯ ನಟಿ ತಾವು ನೀಡಿದ ಹೇಳಿಕೆಯನ್ನು ಹಿಂಪಡೆದಿರುವುದಾಗಿ ತಿಳಿಸಿದ್ದಾರೆ. ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು 2021ರಲ್ಲಿ ರದ್ದುಗೊಳಿಸಲಾದ ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ಮರಳಿ ತರಬೇಕೆಂದು ಹೇಳಿದ್ದರು.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ವಿವಾದಾತ್ಮಕ ಕಾನೂನುಗಳ ಬಗ್ಗೆ ತಮ್ಮ ಹೇಳಿಕೆಯಿಂದ ಅನೇಕರಿಗೆ ಬೇಸರವಾಗಿರಬಹುದು. ಕಳೆದ ಕೆಲವು ದಿನಗಳಲ್ಲಿ ನನಗೆ ರೈತರ ಕಾನೂನಿನ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ರೈತರ ಕಾನೂನನ್ನು ಮರಳಿ ತರಲು ರೈತರು ಪ್ರಧಾನಿ ಮೋದಿಯವರಿಗೆ ಮನವಿ ಮಾಡಬೇಕು ಎಂದು ಸಲಹೆ ನೀಡಿದ್ದೆ. ನನ್ನ ಹೇಳಿಕೆಯಿಂದ ಅನೇಕ ಜನರು ನಿರಾಶೆಗೊಂಡಿದ್ದಾರೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ರೈತರ ಕಾನೂನನ್ನು ಪ್ರಸ್ತಾಪಿಸಿದಾಗ ನಮ್ಮಲ್ಲಿ ಅನೇಕರು ಅದನ್ನು ಬೆಂಬಲಿಸಿದರು ಆದರೆ ಪ್ರಧಾನಿ ಮೋದಿ ಅವರು ಅದನ್ನು ಬಹಳ ಸೂಕ್ಷ್ಮತೆ ಹಾಗೂ ಗಂಭೀರ ವಿಚಾರವಾಗಿ ಪರಿಗಣಿಸಿ ಸಹಾನುಭೂತಿಯಿಂದ ಹಿಂತೆಗೆದುಕೊಂಡರು. ಅವರ ಮಾತಿನ ಘನತೆಯನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇದನ್ನು ನಾನು ಸಹ ನೆನಪಿನಲ್ಲಿಟ್ಟುಕೊಳ್ಳಬೇಕು. ನಾನು ಕಲಾವಿದೆಯಲ್ಲ, ನಾನು ಭಾರತೀಯ ಜನತಾ ಪಕ್ಷದ ಕಾರ್ಯಕರ್ತೆಯಾಗಿರುವುದರಿಂದ ನನ್ನ ಅಭಿಪ್ರಾಯಗಳು ನನ್ನದೇ ಆಗುವ ಬದಲು ಪಕ್ಷದ ನಿಲುವಾಗಬೇಕು. ಹಾಗಾಗಿ ನನ್ನ ಮಾತುಗಳು ಮತ್ತು ನನ್ನ ಆಲೋಚನೆಗಳಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಕೃಷಿ ಕಾನೂನಿನ ಬಗ್ಗೆಯ ಹೇಳಿಕೆಯನ್ನು ನಾನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ಕಂಗನಾ ರಣಾವತ್ ಮಂಗಳವಾರ ನೀಡಿದ ಹೇಳಿಕೆಗೆ ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಅದು ಅವರ ವೈಯಕ್ತಿಕ ಹೇಳಿಕೆಯಾಗಿದೆ. ಪಕ್ಷದ ಪರವಾಗಿ ಇಂತಹ ಹೇಳಿಕೆಗಳನ್ನು ನೀಡಲು ಕಂಗನಾ ರಣಾವತ್ ಅವರಿಗೆ ಅಧಿಕಾರವಿಲ್ಲ ಎಂದು ಹೇಳಿದ್ದರು.
ಕೇಂದ್ರ ಸರ್ಕಾರವು ಹಿಂಪಡೆದಿರುವ ಕೃಷಿ ಮಸೂದೆಗಳ ಕುರಿತು ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಹೇಳಿಕೆ ಆಕೆಯ ವೈಯಕ್ತಿಕ ಹೇಳಿಕೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಬಿಜೆಪಿ ಪರವಾಗಿ ಇಂತಹ ಹೇಳಿಕೆ ನೀಡಲು ಕಂಗನಾ ರಣಾವತ್ ಅವರಿಗೆ ಅಧಿಕಾರವಿಲ್ಲ ಮತ್ತು ಇದು ಕೃಷಿ ಮಸೂದೆಗಳ ಬಗ್ಗೆ ಬಿಜೆಪಿಯ ದೃಷ್ಟಿಕೋನವನ್ನು ಬಿಂಬಿಸುವುದಿಲ್ಲ. ಈ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ ಎಂದು ಗೌರವ್ ಭಾಟಿಯಾ ತಿಳಿಸಿದರು.
ಬಿಜೆಪಿ ವಕ್ತಾರರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಂಗನಾ ರಣಾವತ್ ಇದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಒಪ್ಪಿಕೊಂಡಿದ್ದಾರೆ. ಸಂಪೂರ್ಣವಾಗಿ ರೈತರ ಕಾನೂನುಗಳ ಬಗ್ಗೆ ನನ್ನ ಅಭಿಪ್ರಾಯಗಳು ವೈಯಕ್ತಿಕವಾಗಿವೆ. ಅದು ಆ ಮಸೂದೆಗಳಲ್ಲಿ ಪಕ್ಷದ ನಿಲುವನ್ನು ಪ್ರತಿನಿಧಿಸುವುದಿಲ್ಲ. ಧನ್ಯವಾದಗಳು, ಎಂದು ಕಂಗನಾ ರಣಾವತ್ ಪೋಸ್ಟ್ ಮಾಡಿದ್ದಾರೆ.
ಮಂಡಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂಸದೆ ಕಂಗನಾ ರಣಾವತ್, ಭಾರತದ ಪ್ರಗತಿಯಲ್ಲಿ ರೈತರು ಶಕ್ತಿಯ ಆಧಾರ ಸ್ತಂಭವಾಗಿದ್ದಾರೆ. ಕೆಲವು ರಾಜ್ಯಗಳಲ್ಲಿ ಮಾತ್ರ ಅವರು ಕೃಷಿ ಕಾನೂನುಗಳನ್ನು ವಿರೋಧಿಸಿದ್ದಾರೆ. ರೈತರ ಹಿತದೃಷ್ಟಿಯಿಂದ ಕೃಷಿ ಕಾನೂನುಗಳನ್ನು ಮರಳಿ ತರಬೇಕು ಎಂದು ನಾನು ಕೈ ಜೋಡಿಸಿ ಮನವಿ ಮಾಡುತ್ತೇನೆ ಎಂದು ಹೇಳಿದ್ದರು. (ಏಜೆನ್ಸೀಸ್)