

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡ ದಿನದಿಂದ ಅವರ ಪರವಾಗಿ ಗಟ್ಟಿಯಾಗಿ ನಿಂತವರು ಕಂಗನಾ ರಣಾವತ್. ಬಾಲಿವುಡ್ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ) ಹೇಗೆ ಕೆಲಸ ಮಾಡುತ್ತಿದೆ ಮತ್ತು ಸುಶಾಂತ್ ಅದಕ್ಕೆ ಹೇಗೆ ಬಲಿಯಾದರು ಎಂಬುದನ್ನು ಅವರು ಪದೇಪದೇ ಹೇಳುತ್ತಲೇ ಬಂದಿದ್ದಾರೆ.
ಈ ವಿಷಯವಾಗಿ ಕಂಗನಾ ಮಾತನಾಡಿದ ನಂತರ ಶೇಖರ್ ಕಪೂರ್, ಅಭಯ್ ಡಿಯೋಲ್, ಅಭಿನವ್ ಕಶ್ಯಪ್ ಸೇರಿದಂತೆ ಕೆಲವರು ಮಾತನಾಡಿದರು. ಈಗ ಬಹಳಷ್ಟು ಜನ ಸುಮ್ಮನಾಗಿದ್ದಾರೆ. ಆದರೆ, ಕಂಗನಾ ಮಾತ್ರ ತಮ್ಮ ನಿಲುವನ್ನು ಬದಲಾಯಿಸಿಕೊಂಡಿಲ್ಲ. ಈಗಲೂ ಸುಶಾಂತ್ ಪರವಾಗಿ ನಿಂತಿರುವ ಕಂಗನಾ, ನೆಪೋಟಿಸಂನಿಂದ ಚಿತ್ರರಂಗದಲ್ಲಿ ಸಾಕಷ್ಟು ಪ್ರತಿಭಾವಂತರು ಕಷ್ಟಪಡುತ್ತಿದ್ದಾರೆ ಎಂದೇ ಹೇಳುತ್ತಿದ್ದಾರೆ.
ಒಂದೊಮ್ಮೆ ತಮ್ಮ ಮಾತುಗಳನ್ನು ಪ್ರೂವ್ ಮಾಡುವುದಕ್ಕೆ ಸಾಧ್ಯವಾಗದಿದ್ದರೆ, ಆಗ ಸರ್ಕಾರ ಕೊಟ್ಟಿರುವ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ಸು ಮಾಡುವುದಾಗಿ ಅವರು ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಮನಾಲಿ ನಿವಾಸದಿಂದಲೇ ಮಾತನಾಡಿರುವ ಅವರು, 'ಸುಶಾಂತ್ ಕೇಸ್ನಲ್ಲಿ ನನ್ನನ್ನೂ ವಿಚಾರಣೆಗೆ ಒಳಪಡಿಸಿ ಎಂದು ನಾನು ಈಗಾಗಲೇ ಕೇಳಿಕೊಂಡಿದ್ದೇನೆ. ಆದರೆ, ಮುಂಬೈ ಪೊಲೀಸರು ಈ ಕುರಿತು ಯಾವುದೇ ವಿಚಾರಣೆಯನ್ನು ಇದುವರೆಗೂ ಮಾಡಿಲ್ಲ. ನನ್ನ ಮಾತುಗಳು ಸುಳ್ಳಾದರೆ ಅಥವಾ ನಾನು ಹೇಳಿದ್ದನ್ನು ನನ್ನ ಕೈಲಿ ಪ್ರೂವ್ ಮಾಡುವುದಕ್ಕೆ ಆಗಿದ್ದರೆ, ಆಗ ನಾನು ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ಸು ಮಾಡುತ್ತೇನೆ' ಎಂದು ಸವಾಲು ಹಾಕಿದ್ದಾರೆ ಕಂಗನಾ.
'ನಾನು ಇದುವರೆಗೂ ಏನೇ ಮಾತಾಡಿದ್ದರೂ, ಸುಮ್ಮನೆ ಮಾತಾಡಿಲ್ಲ. ಎಲ್ಲದಕ್ಕೂ ಸಾಕ್ಷಿ ಇಟ್ಟುಕೊಂಡೇ ಮಾತನಾಡಿದ್ದೇನೆ. ಒಂದು ಪಕ್ಷ ಅದು ಸುಳ್ಳಾದರೆ ಪ್ರಶಸ್ತಿ ವಾಪಸ್ಸು ಮಾಡುತ್ತೀನಿ' ಎಂದು ಹೇಳಿದ್ದಾರೆ.
ಈಗಾಗಲೇ ಸಾಕಷ್ಟು ತಿರುವುಗಳನ್ನು ಪಡೆದಿರುವ ಈ ಪ್ರಕರಣವು ಮುಂದಿನ ದಿನಗಳಲ್ಲಿ ಯಾವೆಲ್ಲಾ ರೀತಿಯ ತಿರುವು ಪಡೆಯುತ್ತದೋ ಎಂಬುದು ಯಾರ ಊಹೆಗೂ ನಿಲುಕುತ್ತಿಲ್ಲ.