ಮುಂಬೈ: ಬಾಲಿವುಡ್ ಕ್ವೀನ್ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್(Kangana Ranaut) ಅವರು ‘ಆಸ್ಕರ್ ಅವಾರ್ಡ್ಸ್’ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿನಿಮಾ ಜಗತ್ತಿನ ಅತ್ಯಂತ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿಯನ್ನು ‘ಭಾರತ ವಿರೋಧಿ’ ಎಂದು ಬಣ್ಣಿಸಿದ್ದಾರೆ. ಭಾರತೀಯರನ್ನು ‘ಕೊಳಕು ರೂಪದಲ್ಲಿ’ ತೋರಿಸುವ ಆಸ್ಕರ್‌ಗೆ ಅಂತಹ ಚಿತ್ರಗಳು ಮಾತ್ರ ಆಯ್ಕೆಯಾಗುತ್ತವೆ ಎಂದು ಹೇಳಿದ್ದಾರೆ.
ಇದನ್ನು ಓದಿ: ‘ಎಮರ್ಜೆನ್ಸಿ’ ವೀಕ್ಷಿಸಲು ವಯನಾಡು ಸಂಸದೆಗೆ ಕಂಗನಾ ರಣಾವತ್ ಆಹ್ವಾನ; ಪ್ರಿಯಾಂಕಾ ಗಾಂಧಿ ರಿಯಾಕ್ಷನ್ ಹೀಗಿದೆ.. | Emergency
ಕಿರಣ್ ರಾವ್ ಅಭಿನಯದ ‘ಲಪತಾ ಲೇಡೀಸ್’ ಆಸ್ಕರ್ ರೇಸ್‌ನಿಂದ ಹೊರಗುಳಿದಿರುವ ಸಮಯದಲ್ಲಿ ಕಂಗನಾ ಅವರು ಈ ಹೇಳಿಕೆ ನೀಡಿದ್ದಾರೆ. ಆದರೆ, ‘ಕಂಗುವಾ’, ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’, ‘ಗರ್ಲ್ಸ್ ವಿಲ್ ಬಿ ಗರ್ಲ್ಸ್’, ‘ಆಡುಜೀವಿತಂ’ ಮತ್ತು ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾಗಳು ಆಸ್ಕರ್ ಸ್ಪರ್ಧಿಗಳ ಪಟ್ಟಿಯಲ್ಲಿ ಸೇರಿವೆ.
ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನಲ್ಲಿ ಕಂಗನಾ ಆಸ್ಕರ್ ಪ್ರಶಸ್ತಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ. ಆಸ್ಕರ್‌ಗೆ ಆಯ್ಕೆಯಾದ ಚಿತ್ರಗಳು ಮಾತ್ರ ಭಾರತವನ್ನು ‘ಕೊಳಕು’ ಎಂದು ತೋರಿಸುತ್ತವೆ. ಅವರು ಸಾಮಾನ್ಯವಾಗಿ ಭಾರತಕ್ಕಾಗಿ ಮುಂದಿಡುವ ಕಾರ್ಯಸೂಚಿ ತುಂಬಾ ವಿಭಿನ್ನವಾಗಿದೆ. ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿರುವ ಚಿತ್ರ ಭಾರತ ವಿರೋಧಿಯಾಗಿದೆ ಎಂದು ಹೇಳಿದರು.
ಇನ್ನೂ ಮೆಚ್ಚುಗೆ ಗಳಿಸುತ್ತಿರುವ ಚಿತ್ರದ ಬಗ್ಗೆ ನಾನು ತುಂಬಾ ಉತ್ಸುಕಳಾಗಿದ್ದೆ ಎಂದು ಕಂಗನಾ ಹೇಳಿದ್ದಾರೆ. ಆದರೆ ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆಯಿಂದಾಗಿ ನಿಮಗೆ ಇಷ್ಟವಾದಂತೆ ಪ್ರೀತಿಸುವ ಸ್ವಾತಂತ್ರ್ಯವಿಲ್ಲ ಎಂದು ನಿರ್ದೇಶಕರು ಹೇಳುವುದನ್ನು ಕೇಳಿದೆ. ನಾನು ಚಿತ್ರವನ್ನೂ ನೋಡಿಲ್ಲ ಆದರೆ ಆಸ್ಕರ್‌ಗಾಗಿ ದೇಶವನ್ನು ಕೆಟ್ಟ ಬೆಳಕಿನಲ್ಲಿ ತೋರಿಸುವ ಚಿತ್ರ ಇರಬೇಕು ಎಂದು ಭಾವಿಸುತ್ತೇನೆ. ‘ಸ್ಲಮ್‌ಡಾಗ್ ಮಿಲಿಯನೇರ್’ ಕೂಡ ಹೀಗೇ ಇತ್ತು. ಅವರು ಯಾವಾಗಲೂ ದೇಶವನ್ನು ಹೊಲಸು ಮಾಡುವ ಚಿತ್ರವನ್ನು ಆಯ್ಕೆ ಮಾಡುತ್ತಾರೆ ಎಂದಿದ್ದಾರೆ.
‘ಎಮರ್ಜೆನ್ಸಿ’ ಸಿನಿಮಾದಲ್ಲಿ ಇಂದಿರಾಗಾಂಧಿ ಪಾತ್ರದಲ್ಲಿ ನಟಿಸುತ್ತಿರುವ ಕಂಗನಾ, ನನ್ನ ‘ಎಮರ್ಜೆನ್ಸಿ’ ಸಿನಿಮಾ ದೇಶವನ್ನು ಹೊಲಸು ಎಂದು ತೋರಿಸುವಂಥದ್ದಲ್ಲ. ಇಂದು ಭಾರತ ಯಾವ ಸ್ಥಿತಿಯಲ್ಲಿದೆ ಎಂದು ನೋಡಲು ಪಾಶ್ಚಿಮಾತ್ಯ ದೇಶಗಳು ಸಿದ್ಧವಾಗಿವೆ. ನಾನು ಈ ಪ್ರಶಸ್ತಿಗಳ ಬಗ್ಗೆ ಎಂದಿಗೂ ತಲೆಕೆಡಿಸಿಕೊಂಡಿಲ್ಲ. ನಾನು ಭಾರತೀಯ ಅಥವಾ ಪಾಶ್ಚಿಮಾತ್ಯ ದೇಶಗಳ ಯಾವುದೇ ಪ್ರಶಸ್ತಿಗೆ ಹೆದರುವುದಿಲ್ಲ. ‘ಎಮರ್ಜೆನ್ಸಿ’ ಸಿನಿಮಾ ಅದ್ಬುತವಾಗಿ ತಯಾರಾದ ಮತ್ತು ಅಂತಆರಾಷ್ಟ್ರೀಯ ಚಿತ್ರದಂತೆ ಉತ್ತಮವಾದ ಚಿತ್ರವಾಗಿದೆ. ಆದರೆ ಈ ಜಿಯೋಪಾಲಿಟಿಕ್ಸ್ ಹೇಗೆ ಕೆಲಸ ಮಾಡುತ್ತದೆ ಎಂದು ನನಗೆ ತಿಳಿದಿದೆ. ನಾವು ರಾಷ್ಟ್ರೀಯವಾದಿಗಳು ಈ ಪ್ರಶಸ್ತಿಗಳಿಂದ ಹೆಚ್ಚಿನದನ್ನು ನಿರೀಕ್ಷಿಸುವುದಿಲ್ಲ ಎಂದರು.
ಕಂಗನಾ ರಣಾವತ್ ಅವರ ಎಮರ್ಜೆನ್ಸಿ ಸಿನಿಮಾ ಸೆನ್ಸಾರ್ ಮಂಡಳಿಯೊಂದಿಗೆ ಜಗಳ, ಸಿಖ್ ಸಂಘಟನೆಗಳ ವಿರೋಧ ಮತ್ತು ಹಲವಾರು ಬಾರಿ ಮುಂದೂಡಲ್ಪಟ್ಟಿತ್ತು. ಸಿನಿಮಾದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಪಾತ್ರದಲ್ಲಿ ಕಂಗನಾ ರಣಾವತ್ ನಟಿಸಿದ್ದಾರೆ. ಅನುಪಮ್ ಖೇರ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್ ಮತ್ತು ಸತೀಶ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಕಥೆಯನ್ನು 1975 ರಿಂದ 1977 ರ ಅವಧಿಯ ಸುತ್ತ ಹೆಣೆಯಲಾಗಿದೆ. ಇದು 21 ತಿಂಗಳ ಕಾಲ ಭಾರತದಲ್ಲಿ ಹೇರಲಾದ ತುರ್ತು ಪರಿಸ್ಥಿತಿ ಮತ್ತು ನಂತರದ ಘಟನೆಗಳನ್ನು ಆಧರಿಸಿದೆ. ಸಿನಿಮಾ 17 ಜನವರಿ 2025ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.(ಏಜೆನ್ಸೀಸ್)