ರಕ್ಷಣಾ ಸಚಿವರನ್ನು ಭೇಟಿ ಮಾಡಿದ ಕಂಗನಾ ... ಯಾಕಿರಬಹುದು?

Kangana Ranaut - Final
Published on

ನವದೆಹಲಿ: ಸದಾ ಒಂದಲ್ಲಾ ಒಂದು ವಿವಾದದಲ್ಲಿ ಮುಳುಗೆದ್ದಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​, ಭಾನುವಾರ ನವದೆಹಲಿಯಲ್ಲಿ ಸದ್ದಿಲ್ಲದೆ ರಕ್ಷಣಾ ಸಚಿವರನ್ನು ಭೇಟಿ ಮಾಡಿ ಬಂದಿದ್ದಾರೆ.

ಕಂಗನಾ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ರಕ್ಷಣಾ ಸಚಿವರನ್ನು ಭೇಟಿಯಾದ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಯಾಕೆ, ಏನು ಎಂಬಂತಹ ಪ್ರಶ್ನೆಗಳು ಕೇಳಿಬಂದವು. ಅದಕ್ಕೆ ಅವರೇ ಉತ್ತರಿಸಿರುವ ಅವರು, ರಕ್ಷಣಾ ಸಚಿವರ ಆಶೀರ್ವಾದಗಳನ್ನು ಪಡೆಯುವುದಕ್ಕೆ ಅವರನ್ನು ಭೇಟಿ ಮಾಡುವುದಕ್ಕೆ ಹೋಗಿದ್ದಾಗಿ ಹೇಳಿಕೊಂಡಿದ್ದಾರೆ.

ಇತ್ತೀಚೆಗಷ್ಟೇ 'ತಲೈವಿ' ಚಿತ್ರದ ಚಿತ್ರೀಕರಣವನ್ನು ಮುಗಿಸಿರುವ ಕಂಗನಾ, ಇದೀಗ 'ತೇಜಸ್​' ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ವಾಯುಪಡೆ ಕುರಿತಾಗಿ ಈ ಚಿತ್ರದ ಕಥೆ ಸಾಗುವುದರಿಂದ ರಕ್ಷಣಾ ಭೇಟಿಯಾಗುವುದರ ಜೊತೆಗೆ, ಚಿತ್ರಕ್ಕೆ ಬೇಕಾದ ಅಗತ್ಯ ನೆರವು ಮತ್ತು ಅನುಮತಿಗಳನ್ನು ಕಂಗನಾ ಪಡೆದಿದ್ದಾರೆ.

ರಕ್ಷಣಾ ಮಂತ್ರಿ ಅವರಿಗೆ ಚಿತ್ರದ ಆಶಯ ಹೇಳಿ ಅನುಮತಿ ಪಡೆದಿರುವುದಷ್ಟೇ ಅಲ್ಲ, ಇಂಡಿಯನ್​ ಏರ್​ ಫೋರ್ಸ್​ನ ಮೀಡಿಯಾ ಕೋಆರ್ಡಿನೇಶನ್​ ಸೆಂಟರ್​ಗೂ ಚಿತ್ರಕಥೆಯ ಒಂದು ಪ್ರತಿಯನ್ನು ಕಳಿಸಿರುವ 'ತೇಜಸ್​' ಚಿತ್ರತಂಡವು, ವಾಯುಪಡೆಯಿಂದ ಕೆಲವು ಅನುಮತಿಗಳನ್ನು ಪಡೆದಿದೆ.

'ತೇಜಸ್​' ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಈ ಚಿತ್ರವನ್ನು ಸರ್ವೇಶ್​ ಮೆವಾರಾ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕಂಗನಾ ಪೈಲಟ್​ ಆಗಿ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net