ಎಲ್ಲರಿಗೂ ತಲುಪಲಿ ಕನಕದಾಸರ ಮೌಲ್ಯ : ಪ್ರತಾಪಸಿಂಹ ನಾಯಕ್ ಹೇಳಿಕೆ

New Project (26)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ನಮ್ಮ ಮಣ್ಣಿನ ಶಕ್ತಿಯ ಸಹಜವಾದ ಅಧ್ಯಾತ್ಮದ ತಿರುಳು ತಿಳಿದುಕೊಳ್ಳಲು ವಿದೇಶಿಗರು ನಮ್ಮ ದೇಶಕ್ಕೆ ಬರುತ್ತಾರೆ. ಬದುಕಿಗೆ ಪ್ರೇರಣೆ, ಸಾರ್ಥಕ್ಯ ಕೊಡುವ ಕನಕದಾಸರ ಜಯಂತಿಯನ್ನು ಸರ್ಕಾರ ನಿಯಮಕ್ಕಾಗಿ ನೆನಪಿಸುವಂತಾಗಬಾರದು. ಅವರ ಮೌಲ್ಯ ಎಲ್ಲರಿಗೂ ತಲುಪುವ ದೃಷ್ಟಿಯಿಂದ ಆಚರಣೆಯಾಗಬೇಕು ಎಂದು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು.

ಸೋಮವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ನಡೆದ ಕನಕದಾಸ ಜಯಂತಿ ಉದ್ಘಾಟಿಸಿ ಮಾತನಾಡಿ, ಮಾನವನಿಗೆ ಇತರ ಪ್ರಾಣಿಗಳಿಗಿಂತ ಹೆಚ್ಚು ಶಕ್ತಿಯಿದೆ. ಭಾರತದ ಆತ್ಮವೇ ಅಧ್ಯಾತ್ಮ. ಹಾಗಾಗಿ ಎಲ್ಲವು ಭಗವಂತಿನಿಂದಲೇ ಆಗಿರುವಂತಹದು ಎಂದು ಕಂಡುಕೊಂಡಿದ್ದೇವೆ. ನಾನು ಎಂಬ ಅಹಂಕಾರ ನಮ್ಮಲ್ಲಿಂದ ಹೋದಾಗ ಭಗವಂತನನ್ನು ಕಂಡುಕೊಳ್ಳಲು ಸಾಧ್ಯ. ಸಂತರು ನಮಗೆ ವಚನ, ಕೃತಿಗಳ ಮೂಲಕ ಮೌಲ್ಯವನ್ನು ನೀಡಿದ್ದಾರೆ ಎಂದರು.

ಕಂದಾಯ ನಿರೀಕ್ಷಕ ಪಾವಡಪ್ಪ ದೊಡ್ಡಮನಿ ಮಾತನಾಡಿ, ದಂಡನಾಯಕರ ಮನೆತನದಲ್ಲಿ ಹುಟ್ಟಿದ ಕನಕದಾಸರು ಬದುಕಿನ ನೈಜತೆ ಅರಿತು ಅಧ್ಯಾತ್ಮದೆಡೆಗೆ ವಾಲಿದರು. ಅವರ ಒಂದೊಂದು ಕೃತಿ ಜನಮಾನಸದಲ್ಲಿ ಉಳಿಯುವಂತಾಯಿತು. ಕವನ ಬಹಳಷ್ಟು ಪರಿಪೂರ್ಣವಾಗಿದ್ದವು ಎಂದರು.

ಉಪ ತಹಸೀಲ್ದಾರ್ ಮಲ್ಲಪ್ಪ ನಡುಗಡ್ಡಿ, ಬೆಳ್ತಂಗಡಿ ಪೊಲೀಸ್ ಠಾಣೆ ಎಎಸ್‌ಐ ದುರ್ಗಾದಾಸ್ ಉಪಸ್ಥಿತರಿದ್ದರು. ತಾಪಂ ಕಾರ್ಯಕ್ರಮ ಸಂಯೋಜಕ ಜಯಾನಂದ ಲಾಯಿಲ ನಿರೂಪಿಸಿದರು. ಗ್ರಾಮ ಆಡಳಿತಾಧಿಕಾರಿ ಪರಮೇಶ್ ಕಾರ್ಯಕ್ರಮ ಸಂಯೋಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net