ಕಲ್ಲಡ್ಕ ಮೇಲ್ಸೇತುವೆ ಎರಡೂ ಬದಿ ಸಂಚಾರಕ್ಕೆ ಮುಕ್ತ : ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಚುರುಕು : ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಮುಕ್ತಿ

New Project (14)
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಬಿ.ಸಿ.ರೋಡು- ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಈ ನಡುವೆ ಕಲ್ಲಡ್ಕದಲ್ಲಿ ನಿರ್ಮಾಣಗೊಂಡಿರುವ ಮೇಲ್ಸೆತುವೆ ಸಂಪೂರ್ಣವಾಗಿ ವಾಹನ ಸಂಚಾರಕ್ಕೆ ಮುಕ್ತವಾಗಿದೆ.

ಜೂನ್ 2ರಂದು ಕಲ್ಲಡ್ಕ ಫ್ಲೈಓವರ್‌ನ ಒಂದು ಭಾಗ ಮಾತ್ರ ಸಂಚಾರಕ್ಕೆ ತೆರೆದುಕೊಂಡಿತ್ತು. ಬುಧವಾರದಿಂದ ಇನ್ನೊಂದು ಭಾಗದಲ್ಲೂ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ವಾಹನಗಳು ಯಾವುದೇ ಅಡೆತಡೆ ಇಲ್ಲದೆ ಸರಾಗ ಸಂಚರಿಸಬಹುದು.

ಗುತ್ತಿಗೆ ಕಂಪನಿ ಬದಲಾವಣೆ: ಬಿ.ಸಿ.ರೋಡ್‌ನಿಂದ ಅಡ್ಡಹೊಳೆವರೆಗೆ 64 ಕಿಮೀ ಉದ್ದದ ಹೆದ್ದಾರಿ ನಿರ್ಮಾಣ ಕಾಮಗಾರಿ ಗುತ್ತಿಗೆಯನ್ನು 2017ರಲ್ಲಿ ಎಲ್ ಆ್ಯಂಡ್ ಟಿ ಕಂಪನಿಗೆ 821 ಕೋಟಿ ರೂ.ಗಳಿಗೆ ವಹಿಸಲಾಗಿತ್ತು. ಹಲವು ಕಾರಣಗಳಿಂದ ವಿಳಂಬವಾಗಿ ಬಳಿಕ ಅರ್ಧದಲ್ಲೇ ಸ್ಥಗಿತಗೊಂಡಿತ್ತು. 2021ರಲ್ಲಿ 64 ಕಿಮೀ ಉದ್ದದ ಹೆದ್ದಾರಿಯನ್ನು 49 ಕಿಮೀ ಹಾಗು 15 ಕಿಮೀ ಎಂದು ವಿಭಾಗಿಸಿ ಕೆಎನ್‌ಆರ್ ಕನ್‌ಸ್ಟ್ರಕ್ಷನ್ಸ್ ಹೈದರಾಬಾದ್ ಹಾಗು ಎಂ.ಔತಡೆ ಪ್ರೈವೆಟ್ ಲಿಮಿಟೆಡ್ ಮಹಾರಾಷ್ಟ್ರ ಕಂಪನಿಗಳಿಗೆ ಗುತ್ತಿಗೆ ನೀಡಲಾಯಿತು. ಅಲ್ಲಿಂದ ಕಾಮಗಾರಿಗೆ ವೇಗ ದೊರಕಿದ್ದು, ಪಾಣೆಮಂಗಳೂರು, ಮೆಲ್ಕಾರ್, ಮಾಣಿ, ನೆಕ್ಕಿಲಾಡಿ, ಉಪ್ಪಿನಂಗಡಿ ಜಂಕ್ಷನ್, ಉಪ್ಪಿನಂಗಡಿ ಸುಬ್ರಹ್ಮಣ್ಯ ಕ್ರಾಸ್, ನೆಲ್ಯಾಡಿ, ಪೆರಿಯಶಾಂತಿಗಳಲ್ಲಿ ಓವರ್‌ಪಾಸ್ ಮೇಲ್ಸೇತುವೆ ಹಾಗು ಕಲ್ಲಡ್ಕದಲ್ಲಿ 2.1 ಕಿಮೀ ಉದ್ದದ ಫ್ಲೈಓವರ್ ನಿರ್ಮಾಣ ಕಾಮಗಾರಿ ಏಕಕಾಲದಲ್ಲಿ ಆರಂಭಗೊಂಡಿತ್ತು. ಕಲ್ಲಡ್ಕ ಪೂರ್ಲಿಪ್ಪಾಡಿಯಿಂದ ಕೃಷ್ಣಕೋಡಿವರೆಗೆ ಒಟ್ಟು 2.1 ಕಿಮೀ ಉದ್ದದ ಈ ಮೇಲ್ಸೇತುವೆ ನಿರ್ಮಾಣ ಪೂರ್ಣಗೊಂಡು ಮಂಗಳೂರು, ಬೆಂಗಳೂರು, ಮೈಸೂರು ಭಾಗಗಳಿಗೆ ಸಂಚರಿಸುವ ವಾಹನಗಳಿಗೆ ಯಾವುದೇ ಅಡತಡೆಗಳಿಲ್ಲದೆ ಸಂಚರಿಸಬಹುದು.

ವಾಹನದಟ್ಟಣೆ ಸಮಸ್ಯೆಗೆ ಕಡಿವಾಣ

ಮೆಲ್ಕಾರ್‌ನ ಬೋಳಂಗಡಿ ನರಹರಿ ಪರ್ವತದ ಸಮೀಪ ಕಾಂಕ್ರೀಟ್ ರಸ್ತೆಯೂ ಸಂಚಾರಕ್ಕೆ ಮುಕ್ತಗೊಂಡಿದೆ. ನರಹರಿ ಪರ್ವತ ಏರುರಸ್ತೆಯಲ್ಲಿ ವಾಹನಗಳು ಇದುವರೆಗೆ ಸಾಗುತ್ತಿತ್ತು. ಇದೀಗ ತಗ್ಗುಪ್ರದೇಶದಲ್ಲಿ ನಿರ್ಮಿಸಿದ ಕಾಂಕ್ರೀಟ್ ರಸ್ತೆ ಕ್ಯೂರಿಂಗ್ ಬಳಿಕ ಸಂಚಾರಕ್ಕೆ ಮುಕ್ತಗೊಂಡಿದೆ. ಇದಲ್ಲದೆ, ಕಲ್ಲಡ್ಕ ಫ್ಲೈಓವರ್‌ನ ಕೆಳಗೆ ಸರ್ವೀಸ್ ರಸ್ತೆ ಅಭಿವೃದ್ಧಿಯಾಗುತ್ತಿದ್ದು, ಸಂಚಾರಕ್ಕೆ ಮುಕ್ತಗೊಂಡ ಬಳಿಕ ವಾಹನದಟ್ಟಣೆ ಸಮಸ್ಯೆಗೆ ಕಡಿವಾಣ ಬೀಳಲಿದೆ. ನರಹರಿ ಪರ್ವತ ಏರುರಸ್ತೆ ಅಪಘಾತ ತಾಣವಾಗಿದ್ದು, ಭಾರಿ ವಾಹನಗಳ ಓಡಾಟಕ್ಕೆ ಕಡಿದಾದ ರಸ್ತೆ ಎನಿಸಿಕೊಂಡಿತ್ತು. ಹೀಗಾಗಿ ಈ ರಸ್ತೆಯಲ್ಲಿ ಹೆಚ್ಚಾಗಿ ಟ್ರಾಫಿಕ್ ಜಾಮ್ ಕಂಡುಬರುತ್ತಿತ್ತು. ಹೆದ್ದಾರಿ ಕಾಮಗಾರಿ ಆರಂಭಗೊಂಡು ಬಹುತೇಕ ಭಾಗದ ಕಾಮಗಾರಿ ಪೂರ್ಣಗೊಂಡರೂ ನರಹರಿ ಪರ್ವತ ಭಾಗದ ರಸ್ತೆಯ ಕಾಮಗಾರಿ ಮುಗಿಯದೆ, ಅಗೆದು ಹಾಕಿರುವುದರಿಂದ ವಾಹನ ಸಂಚಾರ ಕಷ್ಟಕರವಾಗಿತ್ತು. ಸರ್ವೀಸ್ ರಸ್ತೆಗಳನ್ನು ಹೊರತುಪಡಿಸಿ ಕಲ್ಲಡ್ಕ ಫ್ಲೈಓವರ್ ಸೇರಿದಂತೆ ಬಿ.ಸಿ.ರೋಡಿನಿಂದ ಉಪ್ಪಿನಂಗಡಿವರೆಗಿನ ಬಹುತೇಕ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡರೂ ನರಹರಿ ಪರ್ವತ ಭಾಗದ ಕಾಮಗಾರಿ ಯಾವಾಗ ಪೂರ್ಣಗೊಳ್ಳುತ್ತದೆ ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು.

ವಿಳಂಬಕ್ಕೆ ಹಲವು ಕಾರಣ

ನರಹರಿ ಪರ್ವತ ಭಾಗದಲ್ಲಿ ಏರುರಸ್ತೆಯನ್ನು ತಗ್ಗು ಮಾಡಿ ರಸ್ತೆ ನಿರ್ಮಿಸಬೇಕಿದ್ದ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದ್ದು, ಜತೆಗೆ ಕಾಮಗಾರಿ ವೇಳೆ ಬೃಹತ್ ಬಂಡೆಗಳನ್ನು ಸ್ಫೋಟಿಸುವ ಸವಾಲು ಕೂಡ ಗುತ್ತಿಗೆ ಕಂಪನಿಗೆ ಎದುರಾಗಿತ್ತು. ನರಹರಿ ಪರ್ವತದ ಭಾಗದಲ್ಲಿ ವಿಳಂಬಗತಿಯಲ್ಲಿ ಸಾಗಿದ ಕಾಮಗಾರಿಗೆ ವೇಗ ದೊರಕಿತ್ತು. ಹೆದ್ದಾರಿ ಪಾಣೆಮಂಗಳೂರಿನಿಂದ ಕಲ್ಲಡ್ಕ ಪೂರ್ಲಿಪ್ಪಾಡಿವರೆಗಿನ ಸರ್ವೀಸ್ ರಸ್ತೆ ಹಾಗು ಮಾಣಿಯ ಒಂದು ಬದಿ ಸರ್ವೀಸ್ ರಸ್ತೆಯ ಕಾಂಕ್ರೀಟ್ ಕಾಮಗಾರಿ ಬಾಕಿಯಿದ್ದು, ಹಂತಹಂತವಾಗಿ ಪೂರ್ಣಗೊಳಿಸಲಾಗುತ್ತಿದೆ.

ನರಹರಿಪರ್ವತ ದೇವಳ ಸಂಪರ್ಕ ಹೇಗೆ?

ನರಹರಿ ಪರ್ವತದ ಏರು ರಸ್ತೆ ಹೆದ್ದಾರಿಯಿಂದ ಮುಕ್ತಗೊಂಡರೂ ಇಲ್ಲಿನ ದೇವಸ್ಥಾನ ಸಂಪರ್ಕಿಸುವ ದೃಷ್ಟಿಯಿಂದ ರಸ್ತೆ ಅಭಿವೃದ್ಧಿ ಪಡಿಸಬೇಕಿದೆ. ತಗ್ಗುಪ್ರದೇಶದಿಂದಲೇ ದೇವಸ್ಥಾನ ಸಂಪರ್ಕ ರಸ್ತೆ ನಿರ್ಮಿಸುವುದು ಅಸಾಧ್ಯ. ಹಿಂದಿನ ಏರುರಸ್ತೆ ಮೂಲಕ ಸಾಗಿ ದೇವಸ್ಥಾನ ಸಂಪರ್ಕಿಸಬೇಕಿದೆ. ಯಾವ ರೀತಿ ಸಂಪರ್ಕ ರಸ್ತೆ ನಿರ್ಮಿಸಲಾಗುತ್ತದೆ ಎಂಬ ಸ್ಪಷ್ಟ ಚಿತ್ರಣ ಸಿಗಲು ರಸ್ತೆ ಕಾಮಗಾರಿ ಮುಗಿಯಬೇಕಷ್ಟೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net