

ಮುಂಬೈ: ಕರೊನಾ ವೈರಸ್ Covid19 ಸೋಂಕು ಜಗತ್ತಿನಾದ್ಯಂತ ವ್ಯಾಪಿಸುತ್ತಿದ್ದು, ಅರ್ಥ ವ್ಯವಸ್ಥೆಯನ್ನೆ ತಲ್ಲಣಗೊಳಿಸುತ್ತಿದೆ. ಅನೇಕ ರಾಷ್ಟ್ರಗಳು ಸಂಪೂರ್ಣ ಬಂದ್ ಆಚರಿಸುತ್ತಿದ್ದರೆ, ಉದ್ಯಮಗಳು ಬಾಗಿಲು ಮುಚ್ಚತೊಡಗಿವೆ. ವ್ಯಾಪಾರ ವಹಿವಾಟುಗಳು ಸರಿಯಾದ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಇವೆಲ್ಲದರ ನಡುವೆ, ಕರೊನಾದ ಮತ್ತೊಂದು ಕರಾಳಮುಖವನ್ನು ಇನ್ಸ್ಟಾಗ್ರಾಂ ಸ್ಟೋರಿ ಮೂಲಕ ತೆರೆದಿಟ್ಟಿದ್ದಾರೆ ಚಿತ್ರನಟಿ ಕಾಜಲ್. ಅವರು ಈ ಸ್ಟೋರಿಯನ್ನು ಹಾರ್ಟ್ ಬ್ರೇಕಿಂಗ್ ಎಂದೂ ಉಲ್ಲೇಖಿಸಿದ್ದಾರೆ.
ಅವರು ಹೇಳಿರುವ ಕಥೆಯ ಸಾರ ಇದು- ಕಳೆದ 48 ಗಂಟೆಗಳ ಅವಧಿಯಲ್ಲಿ ನಾನೇ ಆತನ ಮೊದಲ ಕಸ್ಟಮರ್ ಎಂದು ಹೇಳುತ್ತ ಕ್ಯಾಬ್ ಚಾಲಕ ನನ್ನ ಎದುರು ಅತ್ತು ಬಿಟ್ಟ. ಆತ ಭಾವುಕನಾಗಲು ಕಾರಣವಿದೆ. ಕರೊನಾ ಸೋಂಕಿನ ಕಾರಣಕ್ಕೆ ಎಲ್ಲರೂ ಮನೆಯಲ್ಲಿ ಸುರಕ್ಷಿತವಾಗಿದ್ದಾರೆ. ನನ್ನದು ದಿನಗೂಲಿ ಕೆಲಸ. ಮನೆಗೆ ತರಕಾರಿ, ದಿನಸಿಯನ್ನು ಇಂದಾದರೂ ತೆಗೆದುಕೊಂಡು ಬರುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾಳೆ ನನ್ನ ಪತ್ನಿ. ಈ ಕರೊನಾ ವೈರಸ್ ನಮ್ಮ ಬದುಕಿನ ಮೇಲೆ ಭಾರಿ ಹೊಡೆತವನ್ನೇ ಕೊಟ್ಟಿದೆ ಎಂದು ವಿವರಣೆಯನ್ನೂ ಕೊಟ್ಟ. ನಾನು ಆತನಿಗೆ ಹೆಚ್ಚುವರಿಯಾಗಿ 500 ರೂಪಾಯಿ ಕೊಟ್ಟೆ.. ನಿಜಕ್ಕೂ ಈ ಸನ್ನಿವೇಶ ಹಾರ್ಟ್ ಬ್ರೇಕಿಂಗ್ ಎಂಬ ಷರಾವನ್ನೂ ಅವರು ಬರೆದಿದ್ದಾರೆ.
ದಿನೇದಿನೇ ಕರೊನಾ ಸೋಂಕು ಪೀಡಿತರ ಸಂಖ್ಯೆ ದೇಶಾದ್ಯಂತ ಹೆಚ್ಚಾಗುತ್ತಿದೆ. ಕರೊನಾ ಸೋಂಕು ಪೀಡಿತರ ಸಂಖ್ಯೆಯ ಪಟ್ಟಿಯಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ. ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. (ಏಜೆನ್ಸೀಸ್)