AAP ತೊರೆದು BJP ಸೇರ್ಪಡೆ.. ಒತ್ತಡಕ್ಕೆ ಮಣಿದ್ರಾ ಕೈಲಾಶ್​ ಗೆಹ್ಲೋಟ್​​​​​; ಹಿರಿಯ ನಾಯಕ ಕೊಟ್ಟ ಸ್ಪಷ್ಟನೆ ಹೀಗಿದೆ..

Untitled design - 2024-11-18T135939.716
Published on

ನವದೆಹಲಿ: ಎಎಪಿ ಸರ್ಕಾರದಲ್ಲಿ ಸಚಿವರಾಗಿದ್ದ ಕೈಲಾಶ್ ಗಹ್ಲೋಟ್ ಪಕ್ಷಕ್ಕೆ ರಾಜೀನಾಮೆ ನೀಡಿದ ಒಂದು ದಿನದ ನಂತರ ಸೋಮವಾರ(ನವೆಂಬರ್​​ 18) ಬಿಜೆಪಿಗೆ(BJP) ಸೇರ್ಪಡೆಯಾದರು. ಕೈಲಾಶ್ ಗೆಹ್ಲೋಟ್ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕೇಂದ್ರ ಸಚಿವರಾದ ಮನೋಹರ್ ಲಾಲ್ ಖಟ್ಟರ್ ಮತ್ತು ಅನಿಲ್ ಬಲುನಿ ಅವರ ಸಮ್ಮುಖದಲ್ಲಿ ಬಿಜೆಪಿ ಸದಸ್ಯತ್ವ ಪಡೆದರು.

ದೆಹಲಿ ಸರ್ಕಾರದಲ್ಲಿ ಕೈಲಾಶ್ ಗೆಹ್ಲೋಟ್ ಅವರು ಸಾರಿಗೆ ಸಚಿವಾಲಯ ಸೇರಿದಂತೆ ಹಲವು ಪ್ರಮುಖ ಇಲಾಖೆಗಳನ್ನು ನೋಡಿಕೊಳ್ಳುತ್ತಿದ್ದರು. ಗೆಹ್ಲೋಟ್ ಕಳೆದ ಕೆಲವು ತಿಂಗಳುಗಳಿಂದ ಪಕ್ಷದ ಉನ್ನತ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು ಎನ್ನಲಾಗಿದೆ.

ಬಿಜೆಪಿ ಸೇರಿದ ಕೈಲಾಶ್ ಗೆಹ್ಲೋಟ್ ದೆಹಲಿ ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಸ್ವಾಗತಿಸಿದರು. ಕೈಲಾಶ್ ಗೆಹ್ಲೋಟ್ ಅವರು ಯುವಕರು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಅತ್ಯುತ್ತಮ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಹಳ್ಳಿಗಳು ಮತ್ತು ಹಳ್ಳಿಗಳ ದೊಡ್ಡ ಮುಖವಾಗಿ ಗೆಹ್ಲೋಟ್ ಬಿಜೆಪಿ ಸೇರಿದ್ದಾರೆ. ಕೈಲಾಶ್ ಗೆಹ್ಲೋಟ್ ಅವರ ಅನುಭವವು ಬಿಜೆಪಿಯೊಂದಿಗೆ ಕೈಜೋಡಿಸಿರುವುದು ದೆಹಲಿಯ ಜನರಿಗೆ ಉಪಯುಕ್ತವಾಗಲಿದೆ ಎಂದು ಹೇಳಿದರು.

ಗೆಹ್ಲೋಟ್ ತಮ್ಮ ರಾಜೀನಾಮೆಯಲ್ಲಿ ಪಕ್ಷ ಎದುರಿಸುತ್ತಿರುವ ಗಂಭೀರ ಸವಾಲುಗಳನ್ನು ಉಲ್ಲೇಖಿಸಿದ್ದರು. ರಾಜೀನಾಮೆಯಲ್ಲಿ ‘ಶೀಷ್ಮಹಲ್’ ನಂತಹ ವಿವಾದಗಳನ್ನೂ ಎತ್ತಿದ್ದರು. ಕೇಜ್ರಿವಾಲ್ ಅವರ ಹಿಂದಿನ ಅಧಿಕೃತ ನಿವಾಸ '6 ಫ್ಲಾಗ್‌ಸ್ಟಾಫ್ ರಸ್ತೆ'ಯಲ್ಲಿ ದುಬಾರಿ ವಸ್ತುಗಳು ಮತ್ತು ಆಧುನಿಕ ಸೌಲಭ್ಯಗಳಿಗಾಗಿ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಸಿಬಿಐ ಮತ್ತು ಇಡಿ ಭಯದಿಂದ ಬಿಜೆಪಿ ಪಕ್ಷಕ್ಕೆ ಸೇರಿಲ್ಲ ಎಂದು ಕೈಲಾಶ್ ಗೆಹ್ಲೋಟ್ ಹೇಳಿದರು. ಇದು ರಾತ್ರೋರಾತ್ರಿ ತೆಗೆದುಕೊಂಡ ನಿರ್ಧಾರವಲ್ಲ ಯಾವುದೇ ಒತ್ತಡಕ್ಕೆ ಮಣಿದು ತೆಗೆದುಕೊಂಡಿರುವ ನಿರ್ಧಾರವೂ ಅಲ್ಲ ಎಂದರು.

ಎಎಪಿ ಪ್ರತಿಕ್ರಿಯೆ ಏನು?

ಕೈಲಾಶ್ ಗೆಹ್ಲೋಟ್ ಅವರು ಇಡಿ ಮತ್ತು ಸಿಬಿಐ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅವರು ಬಿಜೆಪಿ ಸೇರುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಎಎಪಿ ನಾಯಕರು ಹೇಳಿದ್ದಾರೆ. ಇದು ಬಿಜೆಪಿಯ ಕೆಟ್ಟ ರಾಜಕೀಯ ಪಿತೂರಿ ಎಂದು ಪಕ್ಷ ಆರೋಪಿಸಿದೆ. ಇಡಿ ಮತ್ತು ಸಿಬಿಐ ಅನ್ನು ದುರುಪಯೋಗಪಡಿಸಿಕೊಂಡು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಬಯಸಿದ್ದಾರೆ ಎಂದು ಹೇಳಿದೆ.

ಬಿಜೆಪಿ ಹೇಳಿದ್ದೇನು?

ಕೇಜ್ರಿವಾಲ್ ಮತ್ತು ಎಎಪಿ ವಿರುದ್ಧ ಬಿಜೆಪಿ ಯಾವ ವಿಷಯಗಳಿಗಾಗಿ ಹೋರಾಡುತ್ತಿದೆಯೋ ಅದೇ ವಿಷಯವನ್ನು ಪ್ರಸ್ತಾಪಿಸಿ ಗೆಹ್ಲೋಟ್ ಹುದ್ದೆಯನ್ನು ತೊರೆದಿದ್ದಾರೆ. ಎಎಪಿ ನಾಯಕರು ಕೂಡ ಕೇಜ್ರಿವಾಲ್ ಅವರನ್ನು ಪ್ರಾಮಾಣಿಕ ನಾಯಕ ಎಂದು ಪರಿಗಣಿಸುವುದಿಲ್ಲ ಎಂಬುದು ಅವರ ರಾಜೀನಾಮೆಯಿಂದ ಸಾಬೀತಾಗಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಪಕ್ಷವು ತಯಾರಿ ನಡೆಸುತ್ತಿರುವಾಗಲೇ ಎಎಪಿಯ ಹಿರಿಯ ನಾಯಕ ಗೆಹ್ಲೋಟ್ ರಾಜೀನಾಮೆ ನೀಡಿದ್ದಾರೆ ಎಂದು ಸಚ್‌ದೇವ ಹೇಳಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net