

ಅಬುಜಾ: ನೈಜೀರಿಯಾ ಪ್ರಧಾನಿ ನರೇಂದ್ರ ಮೋದಿ(PM Modi ) ಅವರಿಗೆ ತನ್ನ ಎರಡನೇ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ಗ್ರ್ಯಾಂಡ್ ಕಮಾಂಡರ್ ಆಫ್ ಆರ್ಡರ್ ಆಫ್ ದಿ ನೈಜರ್ ಪ್ರಶಸ್ತಿಯನ್ನು ಭಾನುವಾರ (ನವೆಂಬರ್ 17) ನೀಡಿ ಗೌರವಿಸಿದೆ. ಪ್ರಧಾನಿ ಮೋದಿ ಈ ಗೌರವಕ್ಕೆ ಪಾತ್ರರಾದ ಎರಡನೇ ವಿದೇಶಿ ಗಣ್ಯರಾಗಿದ್ದಾರೆ. ಇದಕ್ಕೂ ಮೊದಲು ರಾಣಿ ಎಲಿಜಬೆತ್ ಅವರು 1969ರಲ್ಲಿ ಈ ಪ್ರಶಸ್ತಿಯನ್ನು ಪಡೆದ ಏಕೈಕ ವಿದೇಶಿ ಗಣ್ಯರು.
ನೈಜೀರಿಯಾ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರಿಂದ ಪ್ರಶಸ್ತಿ ಸ್ವೀಕರಿಸಿದ ನಂತರ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದರು.
ನೈಜೀರಿಯಾದ ರಾಷ್ಟ್ರೀಯ ಪ್ರಶಸ್ತಿ 'ಗ್ರ್ಯಾಂಡ್ ಕಮಾಂಡರ್ ಆಫ್ ದಿ ನೈಗರ್' ಪ್ರಶಸ್ತಿಯನ್ನು ನೀಡಿರುವುದಕ್ಕೆ ನೈಜೀರಿಯಾ ಸರ್ಕಾರಕ್ಕೆ ಮತ್ತು ನೈಜೀರಿಯಾದ ಜನರಿಗೆ ನನ್ನ ಹೃತ್ಪೂರ್ವಕ ಧನ್ಯವಾದ ಮತ್ತು ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಈ ಗೌರವವನ್ನು ನಮ್ರತೆ ಮತ್ತು ಗೌರವದಿಂದ ಸ್ವೀಕರಿಸುತ್ತೇನೆ. ನಾನು ಈ ಗೌರವವನ್ನು 140 ಕೋಟಿ ಭಾರತೀಯರಿಗೆ ಹಾಗೂ ಭಾರತ ಮತ್ತು ನೈಜೀರಿಯಾ ನಡುವಿನ ಆಳವಾದ ಸ್ನೇಹದ ಬಂಧಕ್ಕೆ ಅರ್ಪಿಸುತ್ತೇನೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಮೂರು ದೇಶಗಳ ಪ್ರವಾಸದಲ್ಲಿದ್ದಾರೆ. ನೈಜೀರಿಯಾದ ಅಧ್ಯಕ್ಷರ ಬೋಲಾ ಅಹಮ್ ಟಿನುಬು ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿಯವರ ಭೇಟಿ ನಡೆಯುತ್ತಿದೆ. 17 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ನೈಜೀರಿಯಾಕ್ಕೆ ಮೊದಲ ಭೇಟಿ ಇದಾಗಿದೆ. ಈ ಹಿಂದೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಈ ದೇಶಕ್ಕೆ ಭೇಟಿ ನೀಡಿದ್ದರು.
ನೈಜೀರಿಯಾಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಫೆಡರಲ್ ಕ್ಯಾಪಿಟಲ್ ಟೆರಿಟರಿ ಸಚಿವ ನೈಸೋಮ್ ಎಜೆನ್ವೊ ವೈಕ್ ಅವರು ಅಬುಜಾ ನಗರದ ’ಕೀ’ಗಳನ್ನು ಹಸ್ತಾಂತರಿಸಿದರು. ಈ ಕೀಲಿಯು ನೈಜೀರಿಯಾದ ಜನರಿಗೆ ಪ್ರಧಾನಿ ಮೋದಿಯವರ ಮೇಲಿನ ನಂಬಿಕೆ ಮತ್ತು ಗೌರವವನ್ನು ಪ್ರತಿಬಿಂಬಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.(ಏಜೆನ್ಸೀಸ್)