

ಪ್ರಶಾಂತ ರಿಪ್ಪನ್ಪೇಟೆ, ಬೆಂಗಳೂರು : ‘‘ಸೌರಾಷ್ಟ್ರೇ ಸೋಮನಾಥಂಚ ಶ್ರೀಶೈಲೇ ಮಲ್ಲಿಕಾರ್ಜುನಮ್, ಉಜ್ಜಯಿನ್ಯಾಂ ಮಹಾಕಾಲಂ ಓಂಕಾರೇತ್ವಮಾಮಲೇಶ್ವರಮ್, ಪರ್ಲ್ಯಾಂ ವೈದ್ಯನಾಥಂಚ ಢಾಕಿನ್ಯಾಂ ಭೀಮ ಶಂಕರಮ್,
ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ, ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ, ಹಿಮಾಲಯೇತು ಕೇದಾರಂ ಘೃಷ್ಣೇಶಂತು ವಿಶಾಲಕೇ.
ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ, ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ.’
ಸಪ್ತ ಜನ್ಮಗಳ ಪಾಪಗಳನ್ನು ನಾಶ ಮಾಡುವ ಶಕ್ತಿ ಇರುವ ದ್ವಾದಶ ಜ್ಯೋತಿರ್ಲಿಂಗಗಳು ಭಾರತದ ಧಾರ್ಮಿಕ ಸಂಸ್ಕೃತಿಯ ಹೆಗ್ಗುರುತುಗಳು. ಜಾತಿ, ಮತ, ಭಾಷೆ, ಪ್ರದೇಶ ಎಂಬ ಎಲ್ಲ ಭೇದಗಳನ್ನು ಬದಿಗೊತ್ತಿ ಸರ್ವರಲ್ಲಿ ಸಾಮರಸ್ಯ ಮತ್ತು ಸಮನ್ವಯವನ್ನು ಸಾಧಿಸುವಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳು ಮಹತ್ವದ ಪಾತ್ರ ವಹಿಸುತ್ತಿವೆ. ಮಹಾ ಶಿವರಾತ್ರಿಯ ಪರ್ವಕಾಲದಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಎಂಟನೇಯದಾದ ಶ್ರೀ ದಾರುಕಾವನ ನಾಗೇಶ್ವರ ಕ್ಷೇತ್ರದ ಕುರಿತು ಒಂದು ಸಂಕ್ಷಿಪ್ತ ಚಿತ್ರಣ ಇಲ್ಲಿದೆ ನೋಡಿ.
ದ್ವಾದಶ ಜ್ಯೋತಿರ್ಲಿಂಗಗಳಲ್ಲಿ 8ನೇಯದಾದ ನಾಗೇಶ್ವರ ಕ್ಷೇತ್ರವು ಗುಜರಾತಿನ ದ್ವಾರಕಾ ಜಿಲ್ಲೆಯ ದಾರುಕವನದಲ್ಲಿದೆ. ಸ್ಥಳ ಪುರಾಣದ ಪ್ರಕಾರ ಈ ಹಿಂದೆ ಸಮುದ್ರದ ಕೆಳಗಿದ್ದ ಅರಣ್ಯದ ನಡುವೆ ಸ್ಥಾಪಿಸಲ್ಪಟ್ಟಿದ್ದ ನಾಗೇಶ್ವರ ಲಿಂಗವು ನಂತರ ಸಮುದ್ರ ಮತ್ತು ಅರಣ್ಯದಿಂದ ಹೊರತಾಗಿದೆ. ದಾರುಕ ಎಂಬ ರಾಕ್ಷಸನ ತನಗಿದ್ದ ತಪೋ ಬಲದಿಂದ ಅನೇಕರನ್ನು ಬಂಧಿಸಿ ಸಮುದ್ರದ ಕೆಳಗಿನ ಕಾರಾಗೃಹದಲ್ಲಿ ಬಂಧಿಸುತ್ತಿದ್ದ. ಹಾಗೆ ಬಂಧಿಸಿದ್ದ ಸುಪ್ರಿಯನೆಂಬ ಶಿವಭಕ್ತನು ಅಲ್ಲಿದ್ದ ಎಲ್ಲ ಖೈದಿಗಳಿಗೆ ಶಿವಮಂತ್ರವನ್ನು ಬೋದಿಸಿ ಶಿವಸ್ಮರಣೆ ಮಾಡುತ್ತಾನೆ. ಆತನ ಭಕ್ತಿಗೆ ಮೆಚ್ಚಿದ ಶಿವನು ಅಲ್ಲಿಯೇ ಪ್ರತ್ಯಕ್ಷನಾಗಿ ನಾಗಸಂತತಿ ಹೆಚ್ಚಾಗಿದ್ದ ಸಮುದ್ರದ ಕೆಳಗಿನ ಪಾತಾಳದಲ್ಲಿ ನಾಗೇಶ್ವರನೆಂಬ ಹೆಸರಿನಲ್ಲಿ ಜ್ಯೋತಿರ್ಲಿಂಗ ಸ್ವರೂಪದಲ್ಲಿ ನೆಲೆಸುತ್ತಾನೆ. ದ್ವಾಪರದಲ್ಲಿ ಶ್ರೀಕೃಷ್ಣ ಆಳ್ವಿಕೆ ನಡೆಸಿದ ದ್ವಾರಕಾನಗರ ಸಮುದ್ರದಲ್ಲಿ ಮುಳುಗಿ ಹೋಗಿದ್ದು, ಈಗಿರುವ ದ್ವಾರಕಾದಿಂದ 15 ಕಿ.ಮೀ.ದೂರದಲ್ಲಿ ದಾರುಕಾವನ ನಾಗೇಶ್ವರ ಕ್ಷೇತ್ರವಿದೆ.
ಜಾಮ್ನಗರ ವಿಮಾನ ನಿಲ್ದಾಣದಿಂದ 140 ಕಿ.ಮೀ ದೂರದಲ್ಲಿರುವ ದಾರುಕವನಕ್ಕೆ ದ್ವಾರಕಾ ಮೂಲಕ ಹೋಗಬೇಕು.