ಬೃಹತ್ ದೇವಾಲಯದಲ್ಲಿರುವ ಶ್ರೀರಾಮನಿಂದ ಸಂಸ್ಥಾಪಿತಗೊಂಡ ರಾಮೇಶ್ವರ ಕ್ಷೇತ್ರ

rameshwaram
Published on

ಪ್ರಶಾಂತ ರಿಪ್ಪನ್‌ಪೇಟೆ, ಬೆಂಗಳೂರು : ‘‘ಸೌರಾಷ್ಟ್ರೇ ಸೋಮನಾಥಂಚ ಶ್ರೀಶೈಲೇ ಮಲ್ಲಿಕಾರ್ಜುನಮ್, ಉಜ್ಜಯಿನ್ಯಾಂ ಮಹಾಕಾಲಂ ಓಂಕಾರೇತ್ವಮಾಮಲೇಶ್ವರಮ್, ಪರ್ಲ್ಯಾಂ ವೈದ್ಯನಾಥಂಚ ಢಾಕಿನ್ಯಾಂ ಭೀಮ ಶಂಕರಮ್,

ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ, ವಾರಣಾಶ್ಯಾಂತು ವಿಶ್ವೇಶಂ ತ್ರಯಂಬಕಂ ಗೌತಮೀತಟೇ, ಹಿಮಾಲಯೇತು ಕೇದಾರಂ ಘೃಷ್ಣೇಶಂತು ವಿಶಾಲಕೇ.

ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ, ಸಪ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ.’

ಸಪ್ತ ಜನ್ಮಗಳ ಪಾಪಗಳನ್ನು ನಾಶ ಮಾಡುವ ಶಕ್ತಿ ಇರುವ ದ್ವಾದಶ ಜ್ಯೋತಿರ್ಲಿಂಗಗಳು ಭಾರತದ ಧಾರ್ಮಿಕ ಸಂಸ್ಕೃತಿಯ ಹೆಗ್ಗುರುತುಗಳು. ಜಾತಿ, ಮತ, ಭಾಷೆ, ಪ್ರದೇಶ ಎಂಬ ಎಲ್ಲ ಭೇದಗಳನ್ನು ಬದಿಗೊತ್ತಿ ಸರ್ವರಲ್ಲಿ ಸಾಮರಸ್ಯ ಮತ್ತು ಸಮನ್ವಯವನ್ನು ಸಾಧಿಸುವಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳು ಮಹತ್ವದ ಪಾತ್ರ ವಹಿಸುತ್ತಿವೆ. ಮಹಾ ಶಿವರಾತ್ರಿಯ ಪರ್ವಕಾಲದಲ್ಲಿ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಏಳನೇಯದಾದ ಶ್ರೀ ರಾಮೇಶ್ವರ ಜ್ಯೋತಿರ್ಲಿಂಗ ಕ್ಷೇತ್ರದ ಕುರಿತು ಒಂದು ಸಂಕ್ಷಿಪ್ತ ಚಿತ್ರಣ ಇಲ್ಲಿದೆ ನೋಡಿ.

ತಮಿಳುನಾಡಿನ ರಾಮನಾಥಪುರ ಜಿಲ್ಲೆಯ ಪಂಬನ್ ದ್ವೀಪದಲ್ಲಿರುವ ಶ್ರೀರಾಮೇಶ್ವರ ಜ್ಯೋತಿರ್ಲಿಂಗವು ಸ್ವತಃ ಶ್ರೀರಾಮಚಂದ್ರನಿಂದ ಸ್ಥಾಪನೆಗೊಂಡಿದೆ.

ಸೇತುವೆ ನಿರ್ಮಾಣಕ್ಕೂ ಮುನ್ನ ಶ್ರೀರಾಮಚಂದ್ರನು ಶಿವಪೂಜೆಗಾಗಿ ಲಿಂಗವನ್ನು ತರುವಂತೆ ಆಂಜನೇಯನಿಗೆ ಆದೇಶಿಸುತ್ತಾನೆ. ಆದರೆ ಹನುಮಂತ ಕೈಲಾಸದಿಂದ ಶಿವಲಿಂಗ ತರುವುದು ತಡವಾಗಿದ್ದಕ್ಕಾಗಿ ಶ್ರೀರಾಮ ಮರಳಿನಿಂದ ಲಿಂಗವನ್ನು ನಿರ್ಮಿಸಿ ಪೂಜಿಸುತ್ತಾನೆ. ದೇಶದ ನಾಲ್ಕು ಪವಿತ್ರ ಕ್ಷೇತ್ರಗಳಲ್ಲಿ ಉತ್ತರದ ಬದರಿನಾಥ, ಪೂರ್ವದ ಜಗನ್ನಾಥ, ಪಶ್ಚಿಮದ ದ್ವಾರಕನಾಥ, ದಕ್ಷಿಣದ ರಾಮನಾಥ ಪ್ರಸಿದ್ಧವಾಗಿದೆ. ಹಿಂದುಗಳಾದವರು ಕಾಶಿ ಹಾಗೂ ರಾಮೇಶ್ವರ ದರ್ಶನವನ್ನು ಜೀವನದಲ್ಲಿ ಒಮ್ಮೆಯಾದರೂ ಮಾಡಬೇಕೆಂಬ ನಿಯಮವಿದೆ. ರಾಮೇಶ್ವರ ದೇವಾಲಯದ ಆವರಣದಲ್ಲಿ 21 ಪವಿತ್ರ ಭಾವಿಗಳಿದ್ದು, ಅದರ ನೀರಿನಿಂದ ಪುಣ್ಯಸ್ನಾನ ಮಾಡುವುದು ಶ್ರೇಷ್ಠ ಎಂಬ ನಂಬಿಕೆ ಇದೆ. ದೇಶದ ಬೃಹತ್ ದೇವಾಲಯಗಳಲ್ಲಿ ರಾಮೇಶ್ವರ ಪ್ರಮುಖವಾಗಿದ್ದು, ಪಾಂಡ್ಯ ದೊರೆಗಳು ದ್ರಾವಿಡ ಶೈಲಿಯಲ್ಲಿ ಕಟ್ಟಿರುವ ಇತಿಹಾಸವಿದೆ.

ರಾಮೇಶ್ವರಕ್ಕೆ ಕನ್ಯಾಕುಮಾರಿ ಹೆದ್ದಾರಿಯ ಮೂಲಕ ಹೋಗಲು ಉತ್ತಮ ರಸ್ತೆ ಸಂಪರ್ಕವಿದ್ದು, 180 ಕಿ.ಮೀ. ದೂರದ ಮಧುರೈನಲ್ಲಿ ವಿಮಾನ ನಿಲ್ದಾಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net