

ಬೆಂಗಳೂರು: ಸಾಹಿತ್ಯದ ಮೂಲಕವೂ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯವಿದ್ದು, ಇದನ್ನು ಸಾಧಿಸಿ ತೋರಿಸಿದವರು ನ್ಯಾಯಮೂರ್ತಿ ಶಿವರಾಜ ವಿ ಪಾಟೀಲ ಎಂದು ಸಿರಿಗೆರೆ ತರಬಾಳು ಮಠದ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯಿಸಿದ್ದಾರೆ.
ಆರ್.ಟಿ.ನಗರದ ತರಳಬಾಳು ಕೇಂದ್ರದಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ 2025ನೇ ಸಾಲಿನ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಡು ಬಡತನ, ಕುಗ್ರಾಮದ ಪರಿಸರವನ್ನು ಮೆಟ್ಟಿ ನಿಂತ ಶಿವರಾಜ ಪಾಟೀಲರು ದೇಶದ ಸರ್ವೋಚ್ಚ ನ್ಯಾಯಾಲಯದ ತನಕ ತಲುಪಿದ್ದು ಅವರ ಯಶೋಗಾಥೆಯನ್ನು ಪ್ರತಿಬಿಂಬಿಸುತ್ತವೆ. ಸಾಹಿತ್ಯದ ಮೂಲಕ ಸಮಾಜದ ಸುಧಾರಣೆ ಪ್ರಯತ್ನಿಸುವ ಮೂಲಕ ಒಂದರ್ಥದಲ್ಲಿ ಸಮಾಜಕ್ಕೆ ಊರುಗೋಲಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಸ್ವಾಮೀಜಿ ವಿವರಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನ್ಯಾ.ಶಿವರಾಜ ವಿ. ಪಾಟೀಲ, ಬಡತನವು ಶಾಪವಲ್ಲ ಬದಲಾಗಿ ಅದೊಂದು ವರ. ಸಾಧನೆ ಮಾಡುವ ಛಲವಿದ್ದಾಗ ಯಾವುದೇ ಸಮಸ್ಯೆಯನ್ನು ಎದುರಿಸಲು ಆತ್ಮವಿಶ್ವಾಸ ಬರುತ್ತದೆ. ಪರಿಶ್ರಮ, ಪ್ರಾಮಾಣಿಕತೆ, ವಿನಯ, ಛಲ, ಶಿಸ್ತು, ಮಾನವೀಯತೆ, ಅನುಕಂಪಗಳೇ ನನ್ನ ಜೀವನದ ಯಶಸ್ಸಿಗೆ ಕಾರಣವಾದ ಮೂಲಮಂತ್ರಗಳಾಗಿವೆ ಎಂದರು. ಪ್ರಶಸ್ತಿಯೊಂದಿಗೆ ನೀಡಿದ 50 ಸಾವಿರ ನಗದನ್ನು ಸಿರಿಗೆರೆಯ ಬೃಹನ್ಮಠದ ದಾಸೋಹ ನಿಧಿಗೆ ಅರ್ಪಿಸಿದರು.
ಸಮಾರಂಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಸಂಗಮೇಶ್ವರ ಗೌಡರು, ದಾವಣಗೆರೆ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ತೊಗಲೇರಿ, ಡಾ.ಹೆಚ.ಎಸ್.ಮಂಜುನಾಥ ಕುರ್ಕಿ, ವಿಶ್ರಾಂತ ಉಪಕುಲಪತಿ ಪ್ರೊ.ಎ.ಮುರಿಗೆಪ್ಪ, ಎಂ.ಎಸ್.ಸುನಂದಾ ದೇವಿ, ಅನ್ನಪೂರ್ಣ ಶಿವರಾಜ ಪಾಟೀಲ, ಮಾಜಿ ಸಚಿವೆ ಡಾ.ಬಿ.ಟಿ.ಲಲಿತಾ ನಾಯಕ್, ಹಂಪಿ ಕನ್ನಡ ವಿವಿಕುಲಸಚಿವ ಡಾ.ಅಮರೇಶ್ ಯಾತ್ಗಲ್,ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ, ಮತ್ತಿತರರು ಪಾಲ್ಗೊಂಡಿದ್ದರು.